ಏಪ್ರಿಲ್‌ 2024 ಸಂಚಿಕೆ

april-2025-issue

ಈ ಸಂಚಿಕೆಯ ಬಗ್ಗೆ: ಏಪ್ರಿಲ್ 2025ರ ಸಂಚಿಕೆಗೆ ನಿಮಗೆ ಸ್ವಾಗತ. ಈ ಸಂಚಿಕೆಯ ವಿಷಯ ‘ದಿನನಿತ್ಯದಲ್ಲಿ ವಿಜ್ಞಾನ’. ಈ ಸಂಚಿಕೆಯಲ್ಲಿರುವ ಲೇಖನಗಳು ಮತ್ತು ತರಗತಿಯಲ್ಲಿ ಬಳಸಬಹುದಾದ ಸಂಪನ್ಮೂಲಗಳನ್ನು ನೀವು ನಿಮ್ಮ ತರಗತಿ ಪ್ರಕ್ರಿಯೆಯಲ್ಲಿ ಸಹಕಾರಿಯಾಗಿದ್ದರೆ, ಅವುಗಳನ್ನು ನೀವು ಯಾವ ರೀತಿಯಲ್ಲಿ ಬಳಸಿದಿರಿ ನಮಗೆ ತಿಳಿಸಿ. ಇತರ ಶಿಕ್ಷಕರಿಗೂ ಉಪಯುಕ್ತವಾಗಬಹುದಾದ ನಿಮ್ಮ ಅನುಭವಗಳನ್ನು ನಾವು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ.

ಈ ಸಂಚಿಕೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಅಥವಾ ನಮಗೆ ಈಮೇಲ್‌ ಮಾಡಿ: iwonder@apu.edu.in

ಸಂಪಾದಕರ ನುಡಿ...

ನಾವು ನಮ್ಮ ದೈನಂದಿನ ಜೀವನದಲ್ಲಿ ಸೇವಿಸುವ ಆಹಾರ, ನಮ್ಮ ಆರೋಗ್ಯ ಮತ್ತು ನೀರು ಹಾಗೂ ವಸ್ತುಗಳ ಬಳಕೆಯ ಬಗ್ಗೆ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಓದಿದ್ದು, ಕೇಳಿದ್ದು, ಅನುಭವಿಸಿದ್ದು ಹಾಗೂ ನಮ್ಮ ನಂಬಿಕೆಗಳು ಮತ್ತು ಭಾವನೆಗಳು ಈ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ. ಇವು ನಾವು ನಮ್ಮ ಸುತ್ತಮುತ್ತಲಿನ ಪರಿಸರ, ಇತರ ಮನುಷ್ಯರು ಮತ್ತು ಜೀವಿಗಳೊಂದಿಗೆ ಹೇಗೆ ಸಂಬಂಧ ಹೊಂದಿದ್ದೇವೆ ಎಂಬುದನ್ನು ನಿರ್ಧರಿಸುತ್ತವೆ. ಪೂರ್ವಸಿದ್ಧತಾ ಮತ್ತು ಮಾಧ್ಯಮಿಕ ಹಂತದ (ಸುಮಾರು 6-14 ವರ್ಷ) ಮಕ್ಕಳು ತಮ್ಮ ಪರಿಸರ ಅಧ್ಯಯನ ಮತ್ತು ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇಂತಹ ದೈನಂದಿನ ಅನುಭವಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ (ಆಹಾರ, ಆರೋಗ್ಯ, ಕಾಯಿಲೆ, ನೀರು, ಜೀವಿಗಳ ಬಗೆಗಿನ ಕಾಳಜಿ) ಬಗ್ಗೆ ಓದುತ್ತಾರೆ. ಆದರೆ, ತರಗತಿಯಲ್ಲಿ ಕಲಿಯುವ ವಿಷಯಗಳನ್ನು ದೈನಂದಿನ ಜೀವನಕ್ಕೆ ಜೋಡಿಸುವ ಅವಕಾಶಗಳು ಸಿಗದಿದ್ದರೆ, ಮಕ್ಕಳಿಗೆ ಈ ಕಲಿಕೆಯು ತಮ್ಮ ನೈಜ ಜಗತ್ತಿಗೆ ಯಾವ ರೀತಿಯಲ್ಲಿ ಸಂಬಂಧಿಸಿದೆ ಎಂಬುದು ಅರ್ಥವಾಗದೇ ಇರಬಹುದು. ಆಗ ವಿಜ್ಞಾನವು ಕೇವಲ ಶಾಲೆಯಲ್ಲಿ ಕಲಿಯುವ ಒಂದು ವಿಷಯವಾಗಿ ಉಳಿದು, ಅವರ ದೈನಂದಿನ ಜೀವನದಿಂದ ದೂರವೇ ಇರುತ್ತದೆ.

ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023 ಹೇಳುವಂತೆ, ಶಾಲಾ ವಿಜ್ಞಾನವು: “ವಿದ್ಯಾರ್ಥಿಗಳು ಲಭ್ಯವಿರುವ ವೈಜ್ಞಾನಿಕ ಪುರಾವೆಗಳನ್ನು ಬಳಸಿ ತಮ್ಮ ದೈನಂದಿನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕು. ಉದಾಹರಣೆಗೆ, ಲಸಿಕೆ ಹಾಕಿಸಿಕೊಳ್ಳುವುದು, ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳುವುದು, ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ವಿಮರ್ಶಾತ್ಮಕವಾಗಿ ಗಮನಿಸುವುದು ಅಥವಾ ತಮ್ಮ ನಂಬಿಕೆಗಳನ್ನು ಮರುಪರಿಶೀಲಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವಂತಹ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದು”. ಇದು ಶಾಲಾ ಹಂತದ ವಿಜ್ಞಾನ ಶಿಕ್ಷಣಕ್ಕಾಗಿ NCF-SE ಹೊಂದಿರುವ ಪ್ರಮುಖ ಗುರಿಗಳಲ್ಲಿ ಒಂದಾದ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಗುರಿಯನ್ನು ರೂಪಿಸುತ್ತದೆ. ಈ ಕುರಿತು NCF-SE ಹೀಗೆ ಹೇಳುತ್ತದೆ: “ವಿಮರ್ಶಾತ್ಮಕ ಮತ್ತು ಪುರಾವೆ ಆಧಾರಿತ ಚಿಂತನೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಯ ಮತ್ತು ಪೂರ್ವಾಗ್ರಹಗಳಿಂದ ಮುಕ್ತಿ ನೀಡುವುದು. ಇದು ವಿಜ್ಞಾನ ಕಲಿಕೆಯ ಕೇಂದ್ರಬಿಂದುವಾಗಿದ್ದು, ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಸಮಗ್ರತೆ, ಪ್ರಶ್ನಿಸುವ ಮನೋಭಾವ, ವಸ್ತುನಿಷ್ಠತೆ, ಪರಿಶ್ರಮ, ಸಹಕಾರ, ಜೀವಸಂಕುಲದ ಬಗ್ಗೆ ಕಾಳಜಿ ಮತ್ತು ಪರಿಸರ ಸಂರಕ್ಷಣೆಯಂತಹ ವೈಜ್ಞಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಸ್ಪಷ್ಟವಾಗಿ ಮತ್ತು ವಿಮರ್ಶಾತ್ಮಕವಾಗಿ ಯೋಚಿಸಿ, ನಂಬಿಕೆಗೂ ಮತ್ತು ಸತ್ಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಯಲು ನೆರವಾಗುವಂತೆ ನಾವು ವಿಜ್ಞಾನವನ್ನು ಹೇಗೆ ಬೋಧಿಸಬಹುದು? ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಸರಿಯಾದ ಆಯ್ಕೆಗಳನ್ನು ಮಾಡಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ನಾವು ಅವರಿಗೆ ಹೇಗೆ ನೀಡಬಹುದು? ಮೊಟ್ಟೆಯ ಬಗ್ಗೆ ಇರುವ ಸಾಮಾನ್ಯ ನಂಬಿಕೆಗಳ ಕುರಿತು ಸತ್ಯಾಂಶ ಆಧಾರಿತ ಚರ್ಚೆಯು, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಆಹಾರದ ಪೌಷ್ಟಿಕಾಂಶದ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಮೋಲ್ ಕಾಟೆ ಮತ್ತು ರಾಕೇಶ್ ತಿವಾರಿ ವಿವರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಠ್ಯಪುಸ್ತಕದ ವಿಷಯಗಳನ್ನು ಆರೋಗ್ಯದ ನಿರ್ಧಾರಗಳೊಂದಿಗೆ ಹೇಗೆ ಜೋಡಿಸಬಹುದು ಎಂಬುದನ್ನೂ ತೋರಿಸಿದ್ದಾರೆ. ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವೈಜ್ಞಾನಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ಪ್ರಾಯೋಗಿಕ ಕಲಿಕಾ ಅನುಭವಗಳನ್ನು ನೀಡುವುದು ಮತ್ತು ಅವುಗಳನ್ನು ದೈನಂದಿನ ಅನ್ವಯಿಕೆಗಳಿಗೆ ಜೋಡಿಸುವುದು ಎಷ್ಟು ಮುಖ್ಯ ಎಂಬುದನ್ನು ಆದಿತ್ಯ ಪ್ರಕಾಶ್ ಹಂಚಿಕೊಂಡಿದ್ದಾರೆ. ಇತ್ತೀಚಿನ ‘ಗಿಲಿಯನ್-ಬಾರೆ ಸಿಂಡೋಮ್’ ಕಾಯಿಲೆಯ ಬಗ್ಗೆ ಸತ್ಯಜಿತ್ ರಥ್ ಬರೆದಿರುವ ಲೇಖನವು, ಸಾಂಕ್ರಾಮಿಕ ರೋಗಗಳು, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ಬಗ್ಗೆ ತಾವು ಕಲಿಯುತ್ತಿರುವ ವಿಷಯಗಳು ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸುವ ಒಂದು ನೈಜ ಉದಾಹರಣೆಯನ್ನು ನೀಡುತ್ತದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಲು ಈ ಲೇಖನವನ್ನು ಬಳಸಬಹುದು.

ವಿಜ್ಞಾನ ಎಂದರೆ ತಾಳ್ಮೆ, ಪರಿಶ್ರಮ ಮತ್ತು ಪ್ರಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದುವುದೂ ಆಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡುವ ನೈಜ ಪ್ರಪಂಚದ ಅನುಭವಗಳು ಯಾವುವು? ಭಾರತೀಯ ಸಸ್ಯವಿಜ್ಞಾನಿ ಜಾನಕಿ ಅಮ್ಮಾಳ್‌ ಅವರ ಬಾಲ್ಯದ ಅನುಭವಗಳ ಬಗ್ಗೆ ಲಾವಣ್ಯ ಕಾರ್ತಿಕ್ ಬರೆದಿರುವ ಪುಸ್ತಕವು, ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಉತ್ತೇಜಿಸುತ್ತದೆ. ಈ ಸಂಬಂಧವು ಅವರ ಜೀವನವನ್ನೇ ರೂಪಿಸಲು ಅಗತ್ಯವಿರುವ ಕುತೂಹಲ ಮತ್ತು ಧೈರ್ಯವನ್ನು ಸಹ ಕೊಡಬಲ್ಲದು.

ವಿಜ್ಞಾನವು ತಮ್ಮ ಜೀವನಕ್ಕೆ ಸಂಬಂಧಿಸಿದ್ದಾಗಿದೆ ಎಂದು ನಿಮ್ಮ ವಿದ್ಯಾರ್ಥಿಗಳು ಅರಿಯಲು ನೀವು ಹೇಗೆ ಸಹಾಯ ಮಾಡಿದ್ದೀರಿ? ನೈಜ ಜಗತ್ತಿನ ಸಮಸ್ಯೆಗಳ ಬಗ್ಗೆ ಅವರ ಆಲೋಚನಾ ಕ್ರಮ ಹೇಗೆ ಬದಲಾಗಿದೆ? ಇದು ನಿಮ್ಮ ಬೋಧನಾ ಪದ್ಧತಿಯನ್ನು ಹೇಗೆ ರೂಪಿಸಿದೆ? ನಿಮ್ಮ ಆಲೋಚನೆ ಮತ್ತು ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ರಾಧಾ ಗೋಪಾಲನ್
ಸಲಹಾ ಸಂಪಾದಕರು

ಸ್ಟಾಫ್‌ರೂಮ್‌