ಬೆಳಕು ಸರಳ ರೇಖೆಗಳಲ್ಲಿ ಚಲಿಸುತ್ತದೆ ಎಂಬುದನ್ನು ಕಲಿಯಲು ಮಕ್ಕಳು ನೇರ ಹಾಗೂ ಬಾಗಿದ ಪೈಪ್ಗಳ ಮೂಲಕ ಬೆಳಕಿನ ಮೂಲವನ್ನು ನೋಡಿದರೆ ಸಾಕು. ಆದರೂ, ಮಾಧ್ಯಮಿಕ ಹಂತದ ಪಠ್ಯಕ್ರಮದಲ್ಲಿ ಪಿನ್ಹೋಲ್ ಕ್ಯಾಮೆರಾ ತಯಾರಿಸುವುದನ್ನು ಶಿಫಾರಸು ಮಾಡಲಾಗಿದೆ. ಏಕೆ? ಇದಕ್ಕೆ ಎರಡು ಕಾರಣಗಳಿರಬಹುದು:
- ವಿದ್ಯಾರ್ಥಿಗಳು ಈ ಗುಣಲಕ್ಷಣವನ್ನು ಬಳಸಿಕೊಂಡು ಪ್ರತಿಬಿಂಬ ಹೇಗೆ ಉಂಟಾಗುತ್ತದೆ ಎಂಬುದನ್ನು ವಿವರಿಸಬಹುದು. ಜೊತೆಗೆ, ಪ್ರತಿಬಿಂಬದ ಮೇಲೆ, ಬೇರೆ ಬೇರೆ ಅಂಶಗಳನ್ನು ಬದಲಾಯಿಸುವುದರ ಪರಿಣಾಮವನ್ನೂ ಅವರು ಪರೀಕ್ಷಿಸಬಹುದು: ಕ್ಯಾಮೆರಾ ವಸ್ತುವಿಗೆ ಹತ್ತಿರದಲ್ಲಿದ್ದರೆ ಏನಾಗುತ್ತದೆ? ಬೆಣ್ಣೆ ಕಾಗದ ಮತ್ತು ರಟ್ಟಿನ ತುಂಡು – ಇವುಗಳಲ್ಲಿ ಉತ್ತಮ ಪರದೆ ಯಾವುದು?
- ವಿದ್ಯಾರ್ಥಿಗಳು ಈ ಕ್ಯಾಮೆರಾದ ಪ್ರತಿಯೊಂದು ಭಾಗವನ್ನೂ ಕಾಣಬಹುದು. ಅದನ್ನು ಬಿಡಿಭಾಗಗಳಾಗಿ ಕಳಚಿ, ಮತ್ತೆ ಜೋಡಿಸಿ ಮತ್ತು ಮಾರ್ಪಡಿಸುವ ಮೂಲಕ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು: ಈ ಪ್ರತಿಬಿಂಬವು ಕನ್ನಡಿಯ ಪ್ರತಿಬಿಂಬಕ್ಕಿಂತ ಹೇಗೆ ಭಿನ್ನವಾಗಿದೆ? ನಾವು ಇನ್ನೊಂದು ರಂಧ್ರವನ್ನು ಮಾಡಿದರೆ ಏನಾಗುತ್ತದೆ?
ಆದರೆ ರಚನಾ ಪ್ರಕ್ರಿಯೆಯೇ ಬಹಳ ಜಟಿಲವಾದರೆ, ಮಕ್ಕಳು ಅನ್ವೇಷಣೆಯ ಕಡೆಗೆ ಕಡಿಮೆ ಗಮನಹರಿಸಿ, ಅದನ್ನು ಪೂರ್ಣಗೊಳಿಸಲು ನೀಡಲಾದ ಸೂಚನೆಗಳನ್ನು ಅನುಸರಿಸುವುದರ ಮೇಲೆಯೇ ಹೆಚ್ಚು ಗಮನ ನೀಡುತ್ತಾರೆ. ಇದನ್ನು ನಾವು ಹೇಗೆ ಸರಿಪಡಿಸಬಹುದು? ಶಿವ ಪಾಂಡೆ ಅವರು ಇದಕ್ಕೆ ಒಂದು ವಿಧಾನವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ವಿಧಾನವನ್ನೂ ನಮಗೆ ತಿಳಿಸಿ. – ಚಿತ್ರಾ ರವಿ (ಮುಖ್ಯ ಸಂಪಾದಕರು)