‘ಆಲ್‌ ದಟ್‌ ಬ್ರೀತ್ಸ್‌’- ಬೇಟೆಯಾಡುವ ಹಕ್ಕಿಗಳು ಏಕೆ ಮುಖ್ಯ

ಅನುವಾದ: ಬಿ. ಆರ್‌. ಮಂಜುನಾಥ್‌ l ಪರಿಶೀಲನೆ: ಎಚ್‌. ಜಿ. ಜಯಲಕ್ಷ್ಮಿ

ಕಾಯಿಲೆಯಾಗಿರುವ ಮತ್ತು ಗಾಯಕ್ಕೊಳಗಾದ ಕಪ್ಪು ಹದ್ದುಗಳನ್ನು ಬದುಕುಳಿಸುವುದರ ಕುರಿತಾದ ಚಲನಚಿತ್ರವೊಂದು ವಿದ್ಯಾರ್ಥಿಗಳು ತಮ್ಮ ನೆರೆಹೊರೆಯಲ್ಲಿರುವ ಗೃಧ್ರಗಳ ಬಗ್ಗೆ ಗಮನಹರಿಸುವಂತೆ ಮಾಡಬಹುದೇ? ಆರೋಗ್ಯಪೂರ್ಣ ಪರಿಸರ ಪದ್ಧತಿಗಳನ್ನು ಕಾಪಾಡುವಲ್ಲಿ ಈ ಮಾಂಸಾಹಾರಿ ಪ್ರಾಣಿಗಳು ವಹಿಸುವ ಪಾತ್ರವನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ನೆರವು ನೀಡಬಲ್ಲದೇ? ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಇರುವ ಪರಸ್ಪರ ಅವಲಂಬನೆಯನ್ನು ಎತ್ತಿ ತೋರಿಸಲು ಈ ಚಲನಚಿತ್ರವನ್ನು ನಾವು ಹೇಗೆ ಉಪಯೋಗಿಸಿಕೊಳ್ಳಬಹುದು?

ಈ ನೆಲಮಹಡಿಯಲ್ಲಿ ಕಾಲಪ್ರವಾಹವು ಬೇರೆಯ ರೀತಿಯಲ್ಲಿಯೇ ಹರಿದುಹೋಗುತ್ತದೆ. ಕೆಲವೊಮ್ಮೆ ಇಲ್ಲಿ ಕೆಲಸ ಮಾಡುತ್ತಿರುವಾಗಲೇ ಒಂದಾನೊಂದು ದಿನ ನನ್ನ ಹೃದಯವು ಸ್ಫೋಟಗೊಂಡು ಅದರಿಂದ ಹದ್ದುಗಳು ಹೊರಗೆ ಹಾರುತ್ತವೆ ಎನಿಸುತ್ತದೆ”. ಸಾವುದ್ ಅವರ ವಿಷಾದದ ಅಭಿವ್ಯಕ್ತಿಯು ನೋವು, ಪ್ರೇಮ ಮತ್ತು ಹಿಡಿದ ಕೆಲಸವನ್ನು ಬಿಡದ ಛಲ ಇವೆಲ್ಲವುಗಳ ಮಿಶ್ರಣವಾಗಿದ್ದು, ಅವರ ಕಣ್ಣುಗಳು ರೆಕ್ಕೆಗೆ ಬ್ಯಾಂಡೇಜ್ ಹಾಕಿರುವ ಒಂದು ಹದ್ದಿನ ತಿವಿಯುವ ನೋಟದೊಂದಿಗೆ ಒಂದಾಗುತ್ತದೆ (ನೋಡಿ: ಚಿತ್ರ 1). ಜಗತ್ತಿನ ಅತ್ಯಂತ ಪರಿಸರ ಮಲಿನ ಮಹಾನಗರಗಳಲ್ಲಿ ಒಂದಾದ ದೆಹಲಿಯ ತಮ್ಮ ಮನೆಯಲ್ಲಿರುವ ತಾತ್ಕಾಲಿಕ ಚಿಕಿತ್ಸಾಲಯ ಒಂದರಲ್ಲಿ ಕಾಯಿಲೆಗೊಳಗಾದ ಮತ್ತು ಗಾಯಗೊಂಡ ಹಕ್ಕಿಗಳಿಗೆ, ಮುಖ್ಯವಾಗಿ ಕಪ್ಪು ಹದ್ದುಗಳಿಗೆ ಕಳೆದ 20 ವರ್ಷಗಳಿಂದಲೂ ಚಿಕಿತ್ಸೆ ನೀಡುತ್ತಿರುವವರು ಮೊಹಮ್ಮದ್ ಸಾವುದ್ ಮತ್ತು ಅವರ ಸೋದರ ನದೀಮ್ ಶಹಜಾದ್. ಭಾರತೀಯ ಚಿತ್ರ ನಿರ್ದೇಶಕ ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀತ್ಸ್’ ಎಂಬ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಾಕ್ಷ್ಯಚಿತ್ರವು ಅವರ ಜೀವರಕ್ಷಕ ಪ್ರಯತ್ನಗಳ ಒಂದು ಸಶಕ್ತವಾದ ಮತ್ತು ಸೂಕ್ಷ್ಮವಾದ ಚಿತ್ರಣವಾಗಿದೆ (ನೋಡಿ: ಚಿತ್ರ 2).

ಈ ಚಲನಚಿತ್ರವು ಮೇಲೆ ಹೇಳಿದ ಸೋದರರು ಹಾಗೂ ಅವರ ಸ್ನೇಹಪರ ಸಹಾಯಕ ಸಾಲಿಕ್ ರೆಹಮಾನ್ ಅವರು ಕಾಯಿಲೆಗೆ ತುತ್ತಾದ ಹಕ್ಕಿಗಳನ್ನು ಹುಡುಕಿ ರಕ್ಷಿಸಲು ಮಹಾನಗರದ ಬೀದಿ ಬೀದಿಗಳಲ್ಲಿ ಅಲೆಯುವ, ಮೇಲ್ನೋಟಕ್ಕೆ ಸಾಧಾರಣವೆಂದು ಕಾಣುವ ಚಟುವಟಿಕೆಯ ಕುರಿತಾಗಿರುತ್ತದೆ (ನೋಡಿ: ಬಾಕ್ಸ್‌ 1). ಚಿತ್ರವು ಮುಂದೆ ಸಾಗಿದಂತೆ, ನಾವು ನಗರದಲ್ಲಿ ವಾಸವಾಗಿರುವ ಅನೇಕ ಪ್ರಾಣಿಗಳ ಮಿಣುಕು ನೋಟಗಳನ್ನು ಕಾಣುತ್ತೇವೆ. ಚರಂಡಿಯ ನೀರಿನಲ್ಲಿ ಓಡಾಡುತ್ತಿರುವ ಹಂದಿಗಳು, ಕಸದ ನಡುವೆ ಸಾಗುತ್ತಿರುವ ಒಂದು ಆಮೆ, ನೀರು ಹರಿಯುತ್ತಿರುವ ರಸ್ತೆಗಳಲ್ಲಿ ಹೇಗೋ ದಾಟಿಕೊಂಡು ಹೋಗುತ್ತಿರುವ ಹಸುಗಳು. ಕಸದ ನಡುವೆ ಆಹಾರ ಹುಡುಕುತ್ತಿರುವ ಇಲಿಗಳು. ಕಟ್ಟಡ ಕಟ್ಟುವ ಸ್ಥಳದಲ್ಲಿ ಕಬ್ಬಿಣದ ತಂತಿಗಳು ಇವುಗಳ ಚಕ್ರವ್ಯೂಹದಲ್ಲಿ ದಾರಿ ಹುಡುಕಿಕೊಂಡು ಹೋಗುವ ಕೋತಿಗಳು.

All that breathes fig 1
ಚಿತ್ರ 1: ಕಪ್ಪುಹದ್ದು (ಮಿಲ್ವಸ್ ಮೈಗ್ರಾನ್ಸ್). ವಿದ್ಯಾರ್ಥಿಗಳನ್ನು ಕೇಳಿ: ನೀವು ಈ ಹಕ್ಕಿಯನ್ನು ನಿಮ್ಮ ನೆರೆಹೊರೆಯಲ್ಲಿ ನೋಡಿದ್ದೀರಾ? ಇದರ ಬಗ್ಗೆ ನಿಮಗೆ ಏನು ತಿಳಿದಿದೆ? ನೀವು ಅದರ ವಿಭಿನ್ನ ದೈಹಿಕ ಲಕ್ಷಣಗಳನ್ನು ಹೇಗೆ ವಿವರಿಸುವಿರಿ? ಉದಾಹರಣೆಗೆ: ಗಾತ್ರ, ಕೊಕ್ಕು , ಉಗುರು ಮತ್ತು ಬಣ್ಣ. ಆಹಾರದ ಜಾಲದಲ್ಲಿ ಈ ಪಕ್ಷಿಗಳು ಯಾವ ಪಾತ್ರವನ್ನು ವಹಿಸುತ್ತವೆ? Credits: Andreas Trepte, Wikimedia Commons. URL: https://commons.wikimedia.org/wiki/ File:Schwarzmilan.jpg. License: CC-BY-SA 4.0 International Deed
All that breathes fig 2
ಚಿತ್ರ 2. ಚಲನಚಿತ್ರದ ಬಿಡುಗಡೆ ಸಂದರ್ಭದ ಭಿತ್ತಿಪತ್ರ (2022). 93 ನಿಮಿಷಗಳ ಈ ಚಲನಚಿತ್ರವನ್ನು ನಿರ್ದೇಶಿಸಿದವರು ಶೌನಕ್ ಸೇನ್. ಚಿತ್ರದ ಟ್ರೈಲರ್ ಅನ್ನು ಇಲ್ಲಿ ನೋಡಬಹುದು: https://www.allthatbreathes.com/trailer. ಪೂರ್ತಿ ಚಲನಚಿತ್ರವನ್ನು HBO ಮ್ಯಾಕ್ಸ್‌ನಲ್ಲಿ ನೋಡಿ (https://www.hbo.com/movies/all-that-breathes).

ಬಾಕ್ಸ್‌ 1. ಪಠ್ಯಕ್ರಮದೊಂದಿಗೆ ಸಂಪರ್ಕಗಳು:

ಈ ಸಂಪನ್ಮೂಲವು ವಿದ್ಯಾರ್ಥಿಗಳು ಪ್ರಾಥಮಿಕ ಹಂತದ (ತರಗತಿ III-V) ಪರಿಸರ ಅಧ್ಯಯನ ಮತ್ತು ಮಧ್ಯಮ ಹಂತದ ತರಗತಿ (ತರಗತಿ VI-VIII) ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಜೀವ ಜಗತ್ತಿನ ಬಗ್ಗೆ ಕಲಿಯುವ ಅಂಶಗಳನ್ನು ನೈಜ ಪ್ರಪಂಚಕ್ಕೆ ಸಂಬಂಧೀಕರಿಸುವ ಹಲವು ಅವಕಾಶಗಳನ್ನು ಕಲ್ಪಿಸುತ್ತದೆ. (ನೋಡಿ- ಚಟುವಟಿಕೆ ಹಾಳೆ I : ಆಕಾಶದಲ್ಲಿನ ಹದ್ದುಗಳು, ಚಟುವಟಿಕೆ ಹಾಳೆ II : ಇತರ ಬೇಟೆಯಾಡುವ ಪಕ್ಷಿಗಳು ಮತ್ತು ಶಿಕ್ಷಕರ ಕೈಪಿಡಿ: ಚಟುವಟಿಕೆ ಹಾಳೆ I ಮತ್ತು II. ಇದು ರಾಷ್ಟ್ರೀಯ ಶಿಕ್ಷಣ ನೀತಿ (2020) ಸ್ಪಷ್ಟೀಕರಿಸುವ ಶಾಲಾ ಶಿಕ್ಷಣದ ಗುರಿಯನ್ನು ಮುಟ್ಟುವ ದಾರಿಯನ್ನೂ ಸೂಚಿಸುತ್ತದೆ. ಅದೆಂದರೆ: “ದಯೆ ಮತ್ತು ಪರಾನುಭೂತಿ, ಧೈರ್ಯ ಮತ್ತು ಕಷ್ಟ ಸಹಿಷ್ಣುತೆ, ವೈಜ್ಞಾನಿಕ ಚಿಂತನೆ ಮತ್ತು ಸೃಜನಶೀಲ ಕಲ್ಪನೆ ಇವುಗಳೊಂದಿಗೆ ಭದ್ರವಾದ ನೈತಿಕ ಆಧಾರಗಳು ಮತ್ತು ಮೌಲ್ಯಗಳನ್ನು ಹೊಂದಿದ್ದು ವಿಚಾರಶೀಲ ಚಿಂತನೆ ಮತ್ತು ಕ್ರಿಯೆಯಲ್ಲಿ ತೊಡಗಬಲ್ಲ ಒಳ್ಳೆಯ ಮನುಷ್ಯರನ್ನು ಬೆಳೆಸುವುದು ಶಿಕ್ಷಣ ವ್ಯವಸ್ಥೆಯ ಧ್ಯೇಯವಾಗಿದೆ”.1 ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE 2023) ಯಾವುದನ್ನು ಸಾಮಾಜಿಕ ತೊಡಗಿಕೊಳ್ಳುವಿಕೆಯ ಸಾಮರ್ಥ್ಯ ಎಂದು ವಿವರಿಸುತ್ತದೋ ಅದನ್ನು ಅಭಿವೃದ್ಧಿಪಡಿಸಲು ಈ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬಹುದು; ಅದರಲ್ಲಿ ಮುಂದೆ ಹೇಳಲಿರುವ ಭಾವಸಂಬಂಧಿ ಅಂಶಗಳು ಸೇರಿವೆ: “ಪರಾನುಭೂತಿ ಮತ್ತು ದಯೆ ಕೇವಲ ಮೌಲ್ಯಗಳಲ್ಲ ಅಥವಾ ಸ್ವಭಾವಗಳಲ್ಲ, ಇವು ಪ್ರಯತ್ನಪೂರ್ವಕ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಲಾಗುವ ಸಾಮರ್ಥ್ಯಗಳು”.1 ಕೊನೆಯದಾಗಿ, NCF-SE 2023ರಲ್ಲಿ ಪಟ್ಟಿ ಮಾಡಲಾಗಿರುವ ಪಠ್ಯಕ್ರಮ ಗುರಿಗಳೊಂದಿಗೆ ಹೊಂದಿಕೆಯಾಗುವಂತೆ ಈ ಕಥೆಯ ಸುತ್ತಲೂ ಶಿಕ್ಷಕರು ಚಟುವಟಿಕೆಗಳನ್ನು ಯೋಜಿಸಬಹುದು.

  • ಪೂರ್ವಸಿದ್ಧತಾ ಹಂತ:
  • ಸಿಜಿ-2: (ವಿದ್ಯಾರ್ಥಿಗಳು) ವೀಕ್ಷಣೆ ಮತ್ತು ಅನುಭವದ ಮೂಲಕ ತಮ್ಮ ಪರಿಸರ ದಲ್ಲಿರುವ ಅಂತರ್ ಅವಲಂಬನೆಯನ್ನು ಅರ್ಥ ಮಾಡಿಕೊಳ್ಳುತ್ತಾ, ‘ವಸುಧೈವ ಕುಟುಂಬಕಂ’ ಎಂಬ ಕಲ್ಪನೆಯನ್ನು ಮನನ ಮಾಡಿಕೊಳ್ಳಲು ಬೇಕಾದ ಆಧಾರವನ್ನು ಗ್ರಹಿಸುತ್ತಾರೆ. ನಿರ್ದಿಷ್ಟವಾಗಿ ಇದು ವಿದ್ಯಾರ್ಥಿಗಳು “ಪರಿಸರದಲ್ಲಿನ ಬದಲಾವಣೆಗಳು ಮತ್ತು ಸ್ಥಳೀಯ ಕಥೆಗಳು ಹಾಗೂ ಹಿರಿಯರು ತಿಳಿಸಿಕೊಡುವಂತಹ ಕುಟುಂಬ ಹಾಗೂ ಸಮುದಾಯದಲ್ಲಿನ ಬದಲಾವಣೆಗಳು (ಕಸುಬುಗಳಲ್ಲಿ ,ಆಹಾರ ಪದ್ಧತಿಗಳಲ್ಲಿ, ಸಂಪನ್ಮೂಲಗಳಲ್ಲಿ, ಸಮಾರಂಭಗಳಲ್ಲಿ, ಸಂವಹನದಲ್ಲಿ ಆಗಿರುವ ಬದಲಾವಣೆಗಳು) ಇವುಗಳನ್ನು ಒಟ್ಟಿಗೆ ನೋಡಲು ಅಗತ್ಯವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನೆರವಾಗಬಹುದು.’’
  • ಸಿಜಿ-4: (ವಿದ್ಯಾರ್ಥಿಗಳು) ಸಾಮಾಜಿಕ ಮತ್ತು ಪ್ರಾಕೃತಿಕ ಪರಿಸರದ ಕುರಿತು ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳುತ್ತಾರೆ. ನಿರ್ದಿಷ್ಟವಾಗಿ ಇದು ವಿದ್ಯಾರ್ಥಿಗಳು, “ಸಸ್ಯಗಳು, ಪಕ್ಷಿಗಳು ಮತ್ತು ಪ್ರಾಣಿಗಳ ಅವಶ್ಯಕತೆಗಳನ್ನು ಮತ್ತು ಅವುಗಳನ್ನು ಹೇಗೆ ಬೆಂಬಲಿಸಬಹುದು’’ (ನೀರು, ಮಣ್ಣು, ಆಹಾರ, ರಕ್ಷಣೆ) ಎಂಬುದನ್ನು ಗುರುತಿಸಲಿಕ್ಕಾಗಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. 1
  • ಮಾಧ್ಯಮಿಕ ಹಂತ: ಸಿಜಿ 3: ವಿಜ್ಞಾನದ ಪರಿಭಾಷೆಯಲ್ಲಿ ಜೀವ ಜಗತ್ತನ್ನು ಶೋಧಿಸುತ್ತದೆ. ಈ ಕೆಳಗಿನ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ಉಪಯೋಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇದು ನೆರವು ನೀಡಬಲ್ಲದು:
  • ನೈಸರ್ಗಿಕ ನೆರೆಹೊರೆಯಲ್ಲಿ ಇರುವ ಜೀವಿಗಳ ವೈವಿಧ್ಯತೆಯನ್ನು ವಿವರಿಸಿ (ಕೀಟಗಳು, ಮಣ್ಣುಹುಳಗಳು, ಬಸವನ ಹುಳಗಳು, ಪಕ್ಷಿಗಳು, ಸಸ್ತನಿಗಳು, ಸರಿಸೃಪಗಳು, ಜೇಡಗಳು, ವೈವಿಧ್ಯಮಯ ಸಸ್ಯಗಳು ಹಾಗೂ ಶಿಲೀಂಧ್ರಗಳು)’’
  • “ಬದುಕಿರುವ ಜೀವಿಗಳು ಮತ್ತು ಅವುಗಳ ಪರಿಸರಗಳು ಇವುಗಳ ನಡುವೆ ಇರುವ ಸಂಬಂಧಗಳ ವಿನ್ಯಾಸಗಳನ್ನು, ಅವುಗಳ ನಡುವೆ ಇರುವ ಅವಲಂಬನೆ ಮತ್ತು ಪ್ರತಿಸ್ಪಂದನೆಯ ಮೂಲಕ ವಿಶ್ಲೇಷಿಸಿ’’1

ಗುಯ್ ಗುಡುವ ನೊಣಗಳು ಸದಾ ಕಾಲವು ಹಿನ್ನೆಲೆಯ ಶಬ್ದವನ್ನು ಸೃಷ್ಟಿಸುತ್ತಿರುತ್ತವೆ. ನಗರದ ಹೊಲಸು ಕಸವು ತುಂಬಿರುವ ಕೊಳ್ಳಗಳಲ್ಲಿ ಹಾರಾಡುತ್ತಿರುವ ಹದ್ದುಗಳು ಎದ್ದುಕಾಣುತ್ತವೆ (ನೋಡಿರಿ ಚಿತ್ರ 3). ಚಿತ್ರದ ಒಂದು ಹಂತದಲ್ಲಿ ಸಾಲಿಕ್ ಅವರು ಒಂದು ಹದ್ದು ಪ್ರತಿದಿನವೂ 10-15 ಗ್ರಾಂಗಳಷ್ಟು ಆಹಾರವನ್ನು ತಿನ್ನುತ್ತದೆ ಎಂದು ಅಂದಾಜು ಮಾಡುತ್ತಾರೆ. ಹೀಗಾಗಿ ಕಸದ ಕೊಳ್ಳಗಳ ಮೇಲೆ ವರ್ತುಲಕಾರವಾಗಿ ಸುತ್ತುವ ಸುಮಾರು 10,000 ಹದ್ದುಗಳು ಪ್ರತಿದಿನ ಹೆಚ್ಚು ಕಡಿಮೆ 100 ರಿಂದ 150 ಕಿಲೋಗ್ರಾಂಗಳಷ್ಟು ಕಸವನ್ನು ತಿನ್ನುತ್ತಿರಬೇಕು ಎಂದು ಅವರು ಮುಂದುವರೆಯುತ್ತಾರೆ. ನಂತರ, ಸಾವುದ್ ಅವರು, ನಗರವನ್ನು ಒಂದು ಜಠರಕ್ಕೆ ಮತ್ತು ಹದ್ದುಗಳನ್ನು “…..ಜೀರ್ಣಪ್ರಕ್ರಿಯೆಗೆ ನೆರವು ನೀಡುವ ಬ್ಯಾಕ್ಟೀರಿಯಾಗಳಿಗೆ ಹೋಲಿಸುತ್ತಾರೆ ”.

ಹೀಗೆ ಬೆಸೆದುಕೊಂಡ ವಿಭಿನ್ನ ಪ್ರಬೇಧಗಳ ಬದುಕು, ಇಂತಹ ಅಂತರ್ ಸಂಬಂಧಗಳ ಕುರಿತು ನಗರಗಳು ಎಷ್ಟೇ ಅಸಡ್ಡೆ ತೋರಿಸಿದರೂ ಸಹ ಯಾವ ಸ್ಥಳವೂ ಸಹ ಪ್ರಕೃತಿಯಿಂದ ಹೊರಗಲ್ಲ ಎಂಬುದನ್ನು ಚೆನ್ನಾಗಿ ನೆನಪಿಸುತ್ತದೆ. ನಗರದಲ್ಲಿ ಅಂಚಿಗೆ ತಳ್ಳಲ್ಪಟ್ಟವರನ್ನು (ಮಾನವರು ಮತ್ತು ಮಾನವರಿಗಿಂತ ಮೇಲೆ ಇರುವವರು ಇಬ್ಬರೂ) ಕಂಡಾಗ ಮತ್ತು ಅವರ ಬದುಕು ಎಷ್ಟು ಅಭದ್ರವಾಗಿದೆ ಎಂಬುದನ್ನು ಗುರುತಿಸಿದಾಗ ‘ಹೌ ಟು ಬಿ ಏ ಪೊಯೆಟ್’ ಎಂಬ ಕವನವು ನೆನಪಾಗುತ್ತದೆ:

“ಅಪವಿತ್ರ ಸ್ಥಳಗಳು ಯಾವುದೂ ಇಲ್ಲ

ಇರುವುದು ಕೇವಲ ಪವಿತ್ರ ಸ್ಥಳಗಳು

ಮತ್ತು ಅಪವಿತ್ರಗೊಂಡ ಸ್ಥಳಗಳು”

– ವೆಂಡೆಲ್ ಬೆರ್ರಿ.2

All that breathes fig 3
ಚಿತ್ರ 3. ಸೂರ್ಯಾಸ್ತದ ಸಮಯದಲ್ಲಿ ಗಾಜಿಯಾಬಾದ್ ನಲ್ಲಿ ಇರುವ 80 ಎಕರೆ ಲ್ಯಾಂಡ್ ಫಿಲ್( ಕಸ ಎಸೆಯುವ ಪ್ರದೇಶ). ವಿದ್ಯಾರ್ಥಿಗಳನ್ನು ಹೀಗೆಂದು ಪ್ರಶ್ನಿಸಿರಿ: ಯಾವುದೇ ಲ್ಯಾಂಡ್ ಫಿಲ್ ನಿಮ್ಮ ಮನೆ ಅಥವಾ ಶಾಲೆಯಿಂದ ಎಷ್ಟು ದೂರದಲ್ಲಿದೆ? ನೀವು ಯಾವುದಾದರೂ ಕಸ ಎಸೆಯುವ ಪ್ರದೇಶಕ್ಕೆ ಭೇಟಿ ನೀಡಿದ್ದೀರಾ ಅಥವಾ ಪ್ರಯಾಣ ಮಾಡುವಾಗ ಅದನ್ನು ನೋಡಿದ್ದೀರಾ? ನೀವು ಮತ್ತು ನಾವೆಲ್ಲರೂ ಕಸ ಎಸೆಯುವ ಪ್ರದೇಶಗಳನ್ನು ಸರಿಯಾಗಿ ನಿರ್ವಹಿಸಲು ಯಾವ ರೀತಿ ಕೊಡುಗೆ ನೀಡಬಹುದು ಎಂದು ಯೋಚಿಸಬಲ್ಲಿರಾ? ಕಪ್ಪು ಹದ್ದುಗಳು ಮತ್ತು ಇತರ ಗಿಡುಗಗಳಂತಹ ಪಕ್ಷಿಗಳು ಲ್ಯಾಂಡ್ ಫಿಲ್ ಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತವೆ? ಕಸವನ್ನು ಆಯುವವರು ಯಾವ ಪಾತ್ರವನ್ನು ವಹಿಸುತ್ತಾರೆ? ಈ ಪಾತ್ರಗಳು ಒಂದರ ಜೊತೆ ಇನ್ನೊಂದು ಸಂಬಂಧವನ್ನು ಹೊಂದಿವೆಯೇ? Credits: Ted Mathys, 2009 AP Fellow, The Advocacy Project, Flickr. URL: https://www.flickr.com/photos/advocacy_project/3638204454. License: CC BY-NC-SA 2.0 Generic Deed.

ಸಾವುದ್ ಮತ್ತು ನದೀಮ್, ಕ್ಯಾನ್ಸರ್‌ನಿಂದ ತೀರಿಕೊಂಡ ತಮ್ಮ ತಾಯಿಯು ತಮಗೆ ಹೇಳಿದ ಕಥೆಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರಾಣಿಗಳು ಮತ್ತು ಇತರ ಜೀವಿಗಳು ಆ ಕಥೆಗಳಲ್ಲಿನ ಮುಖ್ಯ ಪಾತ್ರಧಾರಿಗಳಾಗಿದ್ದರು ಮತ್ತು ಪ್ರಬೇಧಗಳ ನಡುವಿನ ಅಂತರ್ ಸಂಬಂಧಗಳು ಬದುಕಿನ ಮೂಲಭೂತ ವಾಸ್ತವ ಎಂಬಂತೆ ಅವುಗಳಲ್ಲಿ ನೇಯ್ದುಕೊಂಡಿದ್ದವು. ಅದೇನೇ ಇರಲಿ, ಪರಸ್ಪರ ಅವಲಂಬನೆಯ ಈ ಸ್ಪಷ್ಟ ಸ್ವರೂಪಗಳೇ ಆ ಸೋದರರು ಯಾರೂ ಮನ್ನಣೆ ನೀಡದಿರುವಂತಹ ಹದ್ದುಗಳ ಜೀವರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಳ್ಳಲು ಕಾರಣವಲ್ಲ. ಅವರ ಅವಿರತವಾದ ಮತ್ತು ಅವಿಶ್ರಾಂತವಾದ ಪ್ರಯತ್ನಗಳು ಹೆಚ್ಚು ವೈಯಕ್ತಿಕವಾದ ಮತ್ತು ಸಶಕ್ತವಾದ ಮೂಲಗಳಿಂದ ಹುಟ್ಟಿಕೊಂಡಿವೆ. ಸಾವುದ್ ಮತ್ತು ನದೀಮ್ ತಾವು ಹೇಗೆ ಹದ್ದುಗಳನ್ನು ಗಮನಿಸುತ್ತಾ ಬೆಳೆದೆವು ಎಂಬುದನ್ನು ವಿವರಿಸುತ್ತಾರೆ. ತಮ್ಮ ಹದಿಹರೆಯದಲ್ಲಿ ಅವರು ಮೊದಲನೆಯ ಗಾಯಗೊಂಡ ಹದ್ದನ್ನು ಕಂಡರು ಮತ್ತು ಚಿಕಿತ್ಸೆಗಾಗಿ ಅದನ್ನು ಹತ್ತಿರದಲ್ಲಿದ್ದ ಚಿಕಿತ್ಸಾಲಯ ಒಂದಕ್ಕೆ ತೆಗೆದುಕೊಂಡು ಹೋದರು. ಆದರೆ ಆಸ್ಪತ್ರೆಯು ಮಾಂಸಾಹಾರಿ ಪಕ್ಷಿಯೊಂದನ್ನು ತಮ್ಮಲ್ಲಿ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಹದ್ದುಗಳು ‘ಆತಂಕಗಳನ್ನು ನುಂಗಿ ಬಿಡುವುದರಿಂದ’ ಹದ್ದುಗಳಿಗೆ ಆಹಾರ ನೀಡುವುದು ಚಿಂತೆಗಳಿಂದ ನಮ್ಮನ್ನು ಮುಕ್ತಗೊಳಿಸುತ್ತದೆ ಎಂದು ಮುಸ್ಲಿಂ ಧರ್ಮದಲ್ಲಿ ನಂಬಲಾಗಿದೆ. ಆ ಗಾಯಗೊಂಡ ಹದ್ದು ಸೋದರರ ಮೊದಲನೆಯ ರೋಗಿಯಾಯಿತು. ನಂತರ ಇನ್ನಷ್ಟು ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಯಿತು. ಕಳೆದ 15 – 20 ವರ್ಷಗಳಲ್ಲಿ ಸಾವುದ್ ಮತ್ತು ನದೀಮ್ ಸುಮಾರು 20 ಸಾವಿರ ಹದ್ದುಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಅದೇನೇ ಇರಲಿ, ಈ ಕೆಲಸದಲ್ಲಿ ಶ್ರದ್ಧೆ ಎಂಬುದು ಸುಲಭವಾಗಿ ಹುಟ್ಟುವುದಿಲ್ಲ. ತಮ್ಮ ಕೆಲಸಕ್ಕೆ ಅಗತ್ಯವಾದ ಹಣದ ಅಭಾವದಿಂದಾಗಿ ಈ ಸೋದರರು ತಮ್ಮ ಮುಖ್ಯ ಮಾಂಸ ಪೂರೈಕೆದಾರನ ಜೊತೆಯಲ್ಲಿ, ಪಕ್ಷಿಗಳಿಗೆ ತಾವು ಕೊಂಡುಕೊಳ್ಳುವ ಮಾಂಸದ ಬೆಲೆಯನ್ನು ಕಡಿಮೆ ಮಾಡಲು ಕೋರಿಕೊಳ್ಳುವುದನ್ನು ನಾವು ಚಿತ್ರದಲ್ಲಿ ನೋಡುತ್ತೇವೆ. ಮಾಂಸ ಮಾರುವವನು ಅದಕ್ಕೆ ಒಪ್ಪುವುದಿಲ್ಲ. ನಂತರ ಹದ್ದುಗಳು ತಿನ್ನಲಿಕ್ಕಾಗಿ ಮಾಂಸವನ್ನು ಚೂರು ಚೂರು ಮಾಡುತ್ತಾ ಸಾಲಿಕ್, ತಾನು ಸತ್ತಿರುವಂತೆ ನಟಿಸುವುದಾದರೆ ಹದ್ದುಗಳು ತನ್ನನ್ನು ತಿನ್ನಬಹುದೇ ಎಂದು ಸಾವುದ್ ನನ್ನು ಕೇಳುತ್ತಾನೆ. ಸಾವುದ್ ವಿನೋದದಿಂದ ಪ್ರಯತ್ನಿಸಿ ನೋಡು ಎಂದು ಹೇಳಿದರೆ, ನದೀಮನು ಅರ್ಥಗರ್ಭಿತವಾಗಿ ಹೇಳುತ್ತಾನೆ, “ಮನುಷ್ಯರು ತಾವೂ ಸಹ ಮಾಂಸದ ಚೂರು ಎಂಬುದನ್ನು ಮರೆಯುತ್ತಾರೆ…

ನಗರದಲ್ಲಿ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟ ನಡೆಯುತ್ತಿರುವ ಮತ್ತು ಅಶಾಂತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ಚಿತ್ರವು ಅರಳಿಕೊಳ್ಳುತ್ತಾ ಸಾಗುತ್ತದೆ.3 ಸರ್ಕಾರಿ ಗುರುತಿನ ಚೀಟಿಗಳಲ್ಲಿ ತಮ್ಮ ತಂದೆಯ ಹೆಸರೇನಾದರೂ ಕಾಗುಣಿತದ ತಪ್ಪಿನೊಂದಿಗೆ ಬರೆಯಲ್ಪಟ್ಟರೆ ತಮ್ಮ ನಾಗರಿಕತ್ವವೇ ಹೋಗಬಹುದು ಎಂಬ ಸಂಗತಿಯ ಬಗ್ಗೆ ನದೀಮ್ ಯೋಚಿಸುತ್ತಾನೆ. ಅಂತಹ ಮನಸೋ ಇಚ್ಛೆ ನಿಗದಿ ಮಾಡಲ್ಪಡುವ ಮಾನದಂಡಗಳು, ಮನುಷ್ಯರನ್ನು ‘ನೀನು ನಮ್ಮವನಲ್ಲ’ ಎನ್ನುವಂತಹ ಪ್ರಕ್ರಿಯೆಯನ್ನು ಇಷ್ಟು ಸುಲಭಗೊಳಿಸಬಹುದೇ? ಹೊರಗಡೆ ನಡೆಯುತ್ತಿರುವ ಪ್ರತಿಭಟನೆಗಳು ಪ್ರತ್ಯೇಕತಾವಾದಿ ಹಿಂಸೆಯು ಸಿಡಿಯುವುದಕ್ಕೆ ಕಾರಣವಾಗುತ್ತವೆ. ಅದುಮಿಟ್ಟ ಭಯವು ನಗರವನ್ನು ಆವರಿಸುತ್ತದೆ. ವಾಯುಮಾಲಿನ್ಯವು ಎಷ್ಟು ಭಯಾನಕ ಮಟ್ಟವನ್ನು ತಲುಪುತ್ತದೆ ಎಂದರೆ ಪಕ್ಷಿಗಳು ಆಕಾಶದಿಂದ ಉದುರಲಾರಂಭಿಸುತ್ತವೆ (ನೋಡಿರಿ ಚಿತ್ರ 4).

All that breathes fig 4
ಚಿತ್ರ 4: ಮಲಿನಗೊಂಡ ದೆಹಲಿಯ ಆಕಾಶದ ದೃಶ್ಯ. ವಿದ್ಯಾರ್ಥಿಗಳನ್ನು ಹೀಗೆಂದು ಪ್ರಶ್ನಿಸಿರಿ: ಇಲ್ಲಿರುವ ಆಕಾಶವನ್ನು ನಿಮ್ಮ ಊರಿನ ಆಕಾಶದೊಂದಿಗೆ ಹೋಲಿಸಿ ನೋಡಿ. ದೆಹಲಿಯಲ್ಲಿನ ಮಾಲಿನ್ಯವು ಸಸ್ಯಗಳ, ಪ್ರಾಣಿಗಳ ಮತ್ತು ಮನುಷ್ಯರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರಬಹುದು ಎಂದು ನಿಮಗೆ ಅನ್ನಿಸುತ್ತದೆ? ನಿಮ್ಮ ಮನೆ ಅಥವಾ ಶಾಲೆಯ ಬಳಿಯ ಆಕಾಶ ಎಷ್ಟರ ಮಟ್ಟಿಗೆ ಮಲಿನಗೊಂಡಿದೆ? Credits: Jean-Etienne Minh-Duy Poirrier, Flickr. URL: https://www.flickr.com/photos/jepoirrier/5543835085. License: CC BY-NC-SA 2.0 Generic Deed.

ಆದರೂ ಸಹ ಈ ಸೋದರರು ಯಾವುದೋ ನಿಗೂಢ ಶಕ್ತಿಗಳು ಹದ್ದುಗಳು ತುಂಬಿದ ಆಕಾಶದಿಂದ ಕೈಚಾಚಿ ತಮ್ಮನ್ನು ಸೆಳೆಯುತ್ತಿವೆಯೋ ಎಂಬಂತೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹದ್ದುಗಳೊಂದಿಗೆ ಸಾವುದ್‌ನಿಗೆ ಇರುವ ಸಂಬಂಧದ ಬಗ್ಗೆ ನದೀಮ್ ಹೀಗೆನ್ನುತ್ತಾನೆ: “ಶಾಸ್ತ್ರೀಯ ಸಂಗೀತವನ್ನು ಹಾಡುವಾಗ ಗಾಯಕನು ಒಂದು ರಾಗವನ್ನು ನಿಜವಾಗಿಯೂ ಚೆನ್ನಾಗಿ ಹಾಡಿದರೆ ಆಗ ಒಂದು ರೀತಿಯ ಮೈಮರೆಸುವ ಆನಂದದ ಅನುಭವವಾಗುತ್ತದೆ ಎನ್ನುತ್ತಾರೆ. ಈ ಆನಂದವನ್ನು ನಮ್ಮ ಆಸ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಅದನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಕೇವಲ ಒಂದು ಕ್ಷಣ ಅದನ್ನು ಮುಟ್ಟಬಹುದಷ್ಟೇ…. ಹದ್ದುಗಳ ಜೊತೆ ಇದ್ದಾಗ ಸಾವುದ್, ಅಂತಹ ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ”. ತಾನು ತನ್ನ ಕೆಲಸವನ್ನು ಹೇಗೆ ಪರಿಭಾವಿಸಿಕೊಳ್ಳುತ್ತೇನೆ ಎಂಬುದನ್ನು ವಿವರಿಸುತ್ತಾ ನದೀಮ್ ನಗರವೆಂಬ ದೊಡ್ಡ ಗಾಯಕ್ಕೆ ಒಂದು ಪುಟ್ಟ ಬ್ಯಾಂಡ್-ಏಡ್ ಹಾಕಿದ ಹಾಗೆ ಎಂದು ವಿವರಿಸುತ್ತಾನೆ.

ನ್ನ ಬದುಕಿನಿಂದ ತಾನು ಇನ್ನೂ ಹೆಚ್ಚಾದುದನ್ನು ಅಪೇಕ್ಷಿಸುತ್ತೇನೆ ಎಂದು ಆತ ಒಪ್ಪಿಕೊಳ್ಳುತ್ತಾನೆ. ತಮ್ಮ ಕೆಲಸವನ್ನು ಬೆಂಬಲಿಸಲಿಕ್ಕಾಗಿ ವಿದೇಶಿ ಧನಸಹಾಯವನ್ನು ಕೇಳಲು ಔಪಚಾರಿಕ ಸಮ್ಮತಿ ಈ ಸೋದರರಿಗೆ ಸಿಕ್ಕಿದೆ ಎಂಬ ವಿಷಯ ತಿಳಿದಾಗ ಅವರ ಪರವಾಗಿ ನಮಗೆ ಒಂದಿಷ್ಟು ನೆಮ್ಮದಿ ಎನಿಸುತ್ತದೆ ಮತ್ತು ಅದೇ ರೀತಿಯಲ್ಲಿ ತಾವು ಉಳಿಸಲಿಕ್ಕಾಗದ ಹಕ್ಕಿಗಳ ಕಳೇಬರಗಳಿಂದ ಸುತ್ತುವರೆಯಲ್ಪಟ್ಟಾಗ ಸಾವುದ್ ಅನುಭವಿಸುವ ದುಃಖದಲ್ಲಿ ನಾವೂ ಭಾಗಿಯಾಗುತ್ತೇವೆ. ಕೋಮುವಾದಿ ಹಿಂಸೆ, ಪರಿಸರ ಮಾಲಿನ್ಯ ಮತ್ತು ಹೆಚ್ಚುತ್ತಿರುವ ಹಕ್ಕಿಗಳ ಸಾವು ಇಂತಹ ಕಲುಷಿತ ನೀರಿನಲ್ಲಿ ಸಾಗಿ ಹೋಗುತ್ತಲೇ, ತಮ್ಮ ಕೆಲಸವನ್ನು ವಿಸ್ತರಿಸಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ಈ ಸೋದರರ ಉತ್ಸಾಹವು ಮೇಲಕ್ಕೇರುವುದನ್ನು ತೋರಿಸುತ್ತಾ ಪ್ರಸ್ತುತ ಸಾಕ್ಷ್ಯಚಿತ್ರವು ಯಾವುದೇ ಮಹಾ ಸಂಕಥನ ಅಥವಾ ಅಂತಿಮ ತೀರ್ಪಿಗೆ ಹುಡುಕಾಡುವುದಿಲ್ಲ. ಬದಲಿಗೆ ಅದು ನಾವು ಮನಸ್ಸಿನಾಳದಲ್ಲಿ ಅನುಭವಿಸುವ ಸತ್ಯವನ್ನು ಮತ್ತೆ ಒತ್ತಿ ಹೇಳುತ್ತದೆ: “ಚೀಸೋಂಕಿ ಪರ್ವಾ ಇಸ್ಲಿಯೇ ನಹಿ ಕೀ ಜಾತಿ ಕ್ಯೂಕೀ ಉನ್ಕಾ ದೇಶ್, ಯಾ ಮಹಜಬ್, ಯಾ ಪಾಲಿಟಿಕ್ಸ್ ಆಪ್ ಜೈಸಿ ಹೈ. ಜಿಂದಗಿ ಖುದ್ ಏಕ್ ತರಾಹ್ ಕಿ ರಿಶ್ತೇದಾರಿ ಹೈ. ಹಮ್ ಸಬ್ ಹವಾ ಕೇ ಬಿರಾದಾರಿ ಹೈ. ಇಸ್ಲಿಯೇ ಹಮ್ ಪಕ್ಷಿಯೋಂ ಕೋ ಚೋಡ್ ನಹಿ ಸಕ್ತೆ( ಜೀವಿಗಳು ನಮ್ಮ ರಾಷ್ಟ್ರ, ಧರ್ಮ ಅಥವಾ ರಾಜಕೀಯವನ್ನು ಹಂಚಿಕೊಂಡಿವೆ ಎಂಬ ಕಾರಣಕ್ಕಾಗಿ ನಾವು ಅವುಗಳ ಬಗ್ಗೆ ಕಾಳಜಿ ವಹಿಸುವುದಲ್ಲ. ಬದುಕೆಂಬುದೇ ಒಂದು ಬಾಂಧವ್ಯ. ನಾವೆಲ್ಲರೂ ಈ ಗಾಳಿಯನ್ನು ಹಂಚಿಕೊಂಡ ಸಮುದಾಯ. ಆದ್ದರಿಂದಲೇ ನಾವು ಹಕ್ಕಿಗಳನ್ನು ಕೈ ಬಿಡಲಾರೆವು)”.

ಪ್ರಮುಖ ಕಲಿಕೆಗಳು

‘ಆಲ್‌ ದಟ್‌ ಬ್ರೀತ್ಸ್‌’- ಬೇಟೆಯಾಡುವ ಹಕ್ಕಿಗಳು ಏಕೆ ಮುಖ್ಯ
  • ದೆಹಲಿಯಲ್ಲಿ ಗಾಯಗೊಂಡಿರುವ ಹಾಗೂ ಕಾಯಿಲೆಗೆ ತುತ್ತಾದ ಹದ್ದುಗಳನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಮೂರು ಜನರ ಕಥೆಯ ಮೂಲಕ ‘ಆಲ್ ದಟ್ ಬ್ರೀತ್ಸ್’ ಚಿತ್ರವು ಈ ಮಾಂಸಾಹಾರಿಗಳೊಂದಿಗೆ ನಮಗಿರುವ ಅಂತರ್ ಸಂಬಂಧಗಳನ್ನು ಶೋಧಿಸಲು ನಮ್ಮನ್ನು ಆಹ್ವಾನಿಸುತ್ತದೆ.
  • ತಮ್ಮ ನೆರೆಹೊರೆಯಲ್ಲಿರುವ ಹದ್ದುಗಳ ಬಗ್ಗೆ ಒಂದು ಸೂಕ್ಷ್ಮವಾದ ಹಾಗೂ ಪರಾನುಭೂತಿಯುಳ್ಳ ಪರಿಚಯವನ್ನು ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ನೀಡಲು ಇದನ್ನು ಉಪಯೋಗಿಸಿಕೊಳ್ಳಬಹುದು.
  • ಕಸ ಎಸೆಯುವ ಪ್ರದೇಶಗಳಲ್ಲಿ ಹದ್ದುಗಳು ವಹಿಸುವ ಪಾತ್ರದತ್ತ ಗಮನವನ್ನು ಸೆಳೆದು ಮಾಧ್ಯಮಿಕ ಹಂತದಲ್ಲಿರುವ ವಿದ್ಯಾರ್ಥಿಗಳು ಆರೋಗ್ಯಕರ ಪರಿಸರ ಪದ್ಧತಿಗಳನ್ನು ಕಾಪಾಡುವಲ್ಲಿ ಈ ಪಕ್ಷಿಗಳ ಪ್ರಾಮುಖ್ಯತೆಯ ಕುರಿತು ಅರ್ಥ ಮಾಡಿಕೊಳ್ಳುವಲ್ಲಿ ಈ ಚಿತ್ರವು ನೆರವಾಗಬಲ್ಲದು.
  • ಈ ಚಿತ್ರವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಬೇಧಗಳ ವೈವಿಧ್ಯತೆ ಮತ್ತು ಅಂತರ್ ಅವಲಂಬನೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಲ್ಲದು.

ಕೃತಜ್ಞತೆಗಳು

ಈ ಲೇಖನವನ್ನು ನಮಗೆ ಶಿಫಾರಸು ಮಾಡಿದ್ದಕ್ಕಾಗಿ ಮತ್ತು ಇದನ್ನು ಪ್ರಕಟಿಸಲು ಅನುಮತಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ನೆರವಾಗಿದ್ದಕ್ಕಾಗಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿಜೇತಾ ರಘುರಾಮ್ ಅವರನ್ನು ಸಂಪಾದಕರು ವಂದಿಸುತ್ತಾರೆ.

ಟಿಪ್ಪಣಿಗಳು

  • Credits for the image used in the background of the article title: Black kite, Ron Knight, Wikimedia Commons. URL: https://commons.wikimedia.org/wiki/ File:Black_Kite_%28Milvus_migrans%29_%288079585185%29.jpg. License: CC-BY 2.0 Generic Deed.
  • ಈ ಚಿತ್ರ ವಿಮರ್ಶೆಯನ್ನು ಮೊದಲ ಬಾರಿ ಪ್ರಕಟಿಸಿದ್ದು (https://www.ecologicalcitizen.net/): https://www.ecologicalcitizen.net/pdfs/epub-092.pdf. ಇಲ್ಲಿ ಪ್ರಕಟವಾಗಿರುವ ಆವೃತ್ತಿಯ ಭಾಷೆ ಮತ್ತು ರಚನೆಯನ್ನು ನಮ್ಮ ಮಾಧ್ಯಮಿಕ ಶಾಲೆಯ ವಿಜ್ಞಾನದ ಮತ್ತು ಪ್ರಾಥಮಿಕ ಶಾಲೆಯ ಪರಿಸರ ವಿಜ್ಞಾನದ ಶಿಕ್ಷಕರ ಓದುಗ ವೃಂದಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳಲಾಗಿದೆ. ಲೇಖಕರ ಅನುಮತಿಯೊಂದಿಗೆ ಈ ಮಾರ್ಪಾಡುಗಳನ್ನು ಮಾಡಲಾಗಿದೆ.
  • ಸಾವುದ್, ನದೀಮ್ ಮತ್ತು ಸಾಲಿಕ್ ಅವರ ಕಾರ್ಯದ ಬಗ್ಗೆ ಹೆಚ್ಚು ತಿಳಿಯಲು ಮತ್ತು ಅದಕ್ಕೆ ಕೊಡುಗೆ ನೀಡಲು ಇಲ್ಲಿಗೆ ಭೇಟಿ ಕೊಡಿ: https://www.raptorrescue.org/.
  • ದೆಬೋರಾ ದತ್ತ ಅವರ ಇನ್ನೂ ಹೆಚ್ಚು ಸಾಹಿತ್ಯಕ ಹರಟೆಗಳನ್ನು ಓದಲು ಭೇಟಿ ಕೊಡಿ: https://linktr.ee/deborahdutta.
  • ಈ ಲೇಖನದಲ್ಲಿ ಬೇರ್ಪಡಿಸಬಹುದಾದ ಮೂರು ಚಟುವಟಿಕೆ ಹಾಳೆಗಳಿವೆ. ಚಟುವಟಿಕೆ ಹಾಳೆ I. ನಿಮ್ಮ ಆಕಾಶದಲ್ಲಿನ ಹದ್ದುಗಳು. ಚಟುವಟಿಕೆ ಹಾಳೆ II. ಬೇರೆ ರೀತಿಯ ಹದ್ದುಗಳನ್ನು ಗಮನಿಸಿರಿ ಮತ್ತು III. ಶಿಕ್ಷಕರ ಕೈಪಿಡಿ: ಚಟುವಟಿಕೆ ಹಾಳೆ I ಮತ್ತು II. ಮೊದಲನೆಯ ಚಟುವಟಿಕೆ ಹಾಳೆಯಲ್ಲಿ ಇರುವ ಹದ್ದುಗಳು ಎ) ಕಪ್ಪು ಹದ್ದು, ಬಿ) ಕಪ್ಪು ಕಿವಿಯ ಹದ್ದು, ಸಿ) ಕಪ್ಪು ರೆಕ್ಕೆಯ ಹದ್ದು ಮತ್ತು ಡಿ) ಬ್ರಾಹ್ಮಿಣಿ ಹದ್ದು.

ಪರಾಮರ್ಶನ

  1. National Steering Committee for National Curriculum Frameworks. ‘National Curriculum Framework for School Education 2023’. National Council of Educational Research and Training. URL: https://ncert.nic.in/pdf/NCFSE-2023-August_2023.pdf.
  2. Berry W (2001). ‘How to be a poet (to remind myself)’. Poetry Foundation. URL: https://www.poetryfoundation.org/poetrymagazine/poems/41087/how-to-be- a-poet.
  3. Bhatia KV & Gajjala R (2020). ‘Examining anti-CAA protests at Shaheen Bagh: Muslim women and politics of the Hindu India’. International Journal of Communication (14): 18.