ಅಕ್ಟೋಬರ್ ತಿಂಗಳಿನಲ್ಲಿ ನನಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ (ರಾಧಾ ಗೋಪಾಲನ್ ಮತ್ತು ವಿಜೇತಾ ರಘುರಾಮ್) ದಾಮೋಹ್ ಮತ್ತು ಭೋಪಾಲ್ ಗಳಲ್ಲಿರುವ 9 ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಅವಕಾಶ ದೊರಕಿತು. ತಾವು ನಿಷ್ಕ್ರಿಯರಾಗಿ ಉಳಿಯಲು ಒಪ್ಪದ ಅನೇಕ ವಿಜ್ಞಾನ ಶಿಕ್ಷಕರು ಮತ್ತು ವಿಜ್ಞಾನ ಬೋಧಕರ ವರದಿಗಳನ್ನು ಆಲಿಸಲು ನಮಗೆ ಇದೊಂದು ಅವಕಾಶವಾಗಿತ್ತು. ಆಡಳಿತ ವರ್ಗ, ಅಧಿಕಾರಶಾಹಿ, ಸಂಪನ್ಮೂಲಗಳು ಮತ್ತು ಸಮಯದ ಕೊರತೆ, ತಮ್ಮ ಸಹೋದ್ಯೋಗಿಗಳ ಸಿನಿಕತನ, ತಮ್ಮ ಕೆಲಸದ ಕುರಿತು ಬೇರೆಯವರಿಗಿದ್ದ ಋಣಾತ್ಮಕ ಗ್ರಹಿಕೆ, ತಮ್ಮ ಬದುಕಿನ ಪರಿಸ್ಥಿತಿಗಳು, ವಿದ್ಯಾರ್ಥಿಗಳಾಗಿದ್ದಾಗ ಪಡೆದುಕೊಂಡ ತಮ್ಮ ಅನುಭವಗಳು ಮತ್ತು / ಅಥವಾ ಶಿಕ್ಷಕರಾಗಿ ತಮ್ಮಲ್ಲೇ ಇದ್ದ ಆತಂಕಗಳು, ಇವೆಲ್ಲವೂ ಸೇರಿ ತಾವು ತಮ್ಮ ಬೋಧನೆ ಮತ್ತು ಕಲಿಕೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವಂತಹ ಸಾಧ್ಯತೆಯನ್ನು ಅವರು ತಿರಸ್ಕರಿಸಿದರು. ಹೀಗೆ ಅವರು ತಿರಸ್ಕರಿಸುವುದಕ್ಕೆ ಕಾರಣವು, ಅವರು ತಮ್ಮಲ್ಲಿ ಮತ್ತು ಸಮಾಜದಲ್ಲಿ ಶಿಕ್ಷಕರು ವಹಿಸುವ ಪಾತ್ರದಲ್ಲಿ ಕಂಡುಕೊಂಡ ಮೌಲ್ಯದೊಳಗೆ ಅಡಕವಾಗಿತ್ತು. ತಮ್ಮ ಸಹೋದ್ಯೋಗಿಗಳೊಂದಿಗೆ ಅವರು ತಮ್ಮ ವೈಫಲ್ಯಗಳನ್ನು ಹಂಚಿಕೊಳ್ಳುವಲ್ಲಿ ಪ್ರದರ್ಶಿಸಿದ ಪಾರದರ್ಶಕತೆಯಲ್ಲಿತ್ತು. ತರಗತಿಗಳ ಒಳಗೆ ಹೊಸದೊಂದನ್ನು ಪ್ರಯತ್ನಿಸಲು ಅವರಲ್ಲಿದ್ದ ಸಂಕಲ್ಪದೊಳಗೆ ಇತ್ತು. ಅನೇಕ ಬಾರಿ ಈ ಕಥೆಗಳು ಹೊರಗಿನ ಬಂಡಾಯದ ಬಿಸಿಯಲ್ಲಿ ಹೆಚ್ಚಾಗಿ ಇರಲಿಲ್ಲ, ಬದಲಿಗೆ ಅವರೊಳಗಿನ ಪ್ರತಿರೋಧದ ನಿಶ್ಶಬ್ದತೆಯಲ್ಲಿ ಇತ್ತು. ಅದರೊಳಗೆ ದೈನಂದಿನ ಬದುಕಿನ ಗುಣವಿತ್ತು. ಪ್ರತಿಯೊಂದು ಕಥನವೂ ಭಿನ್ನವಾಗಿತ್ತು. ಆದರೆ ಅವೆಲ್ಲವೂ ಕೂಡ ವಿಜ್ಞಾನ ಶಿಕ್ಷಕರು ತಮ್ಮದೇ ಕೆಲಸದಲ್ಲಿ ಬೆಳೆಯುತ್ತಾ ಹೋಗುವುದರ ಕುರಿತಾದ ಕಥನಗಳಾಗಿದ್ದವು.
ಈ ಬೆಳವಣಿಗೆಯನ್ನು ಬೆಂಬಲಿಸುವ ಅಂಶ ಯಾವುದು? ಕೆಲಸ ಕಾರ್ಯದ ವಿಭಿನ್ನ ಸನ್ನಿವೇಶಗಳಲ್ಲಿ ವಿಜ್ಞಾನ ಶಿಕ್ಷಕರಿಗೆ ಸಮಾನವಾಗಿರುವ ಎರಡು ಅಂಶಗಳು ನನ್ನ ಮನಸ್ಸಿಗೆ ಬರುತ್ತವೆ. ಅದರಲ್ಲಿ ಒಂದು ನಾವು ನಮ್ಮೊಳಗೆ ಬೈತಿಟ್ಟುಕೊಳ್ಳುವಂತಹ ಪ್ರಶ್ನೆಗಳ ಮಾದರಿಯದ್ದು. ಎಂದರೆ ಈ ರೀತಿಯ ಪ್ರಶ್ನೆಗಳು: ತಮ್ಮ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳಲ್ಲಿ ವಿದ್ಯಾರ್ಥಿಗಳ ಕುತೂಹಲ ಮತ್ತು ಆಸಕ್ತಿಯನ್ನು ಕೆರಳಿಸುವಂತೆ ನಾವು ತೊಡಗಿಕೊಳ್ಳುವುದು ಹೇಗೆ? ವಿದ್ಯಾರ್ಥಿಗಳು ತಾವು ತರಗತಿಯಲ್ಲಿ ಕಲಿಯುವುದನ್ನು ತಮ್ಮ ದೈನಂದಿನ ಅನುಭವಗಳಲ್ಲಿ ಕಂಡುಕೊಳ್ಳುವಂತೆ ನಾವು ಹೇಗೆ ಮಾಡಬಲ್ಲೆವು? ವಿಜ್ಞಾನ ತರಬೇತಿ ತರಗತಿಗಳಲ್ಲಿ ತಾವು ಕಲಿಯುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ವಾಸ್ತವಿಕ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಬಹುದು? ಸಮುದಾಯಗಳಲ್ಲಿರುವ ಆಚರಣೆಗಳು ಮುಂದಿಡುವ ಅವಕಾಶಗಳಿಗೆ ಅವರು ತೆರೆದುಕೊಳ್ಳುವಂತೆ ವಿಜ್ಞಾನದ ಪ್ರಕ್ರಿಯೆಯು ಮಾಡಬಲ್ಲದೇ? ಕಳೆದ ದಿನಗಳಲ್ಲಿ ಮನುಷ್ಯರು ಏನನ್ನು ಅರಿತಿದ್ದರೋ, ಅದನ್ನು ಆಧರಿಸಿ ಇಂದು ಅನೇಕ ವ್ಯಕ್ತಿಗಳು ಮಾಡುತ್ತಿರುವ ಪ್ರಯತ್ನಗಳಿಂದಾಗಿ ನಾವು ಜಗತ್ತಿನ ಬಗ್ಗೆ ಏನೆಲ್ಲವನ್ನು ತಿಳಿದುಕೊಂಡಿದ್ದೇವೋ ಅದು ಹೊರಹೊಮ್ಮಿದೆ ಎಂಬುದನ್ನು ತಿಳಿಯಲು ಅವರಿಗೆ ಅದು ನೆರವಾಗಬಲ್ಲದೇ? ನಮ್ಮ ವಿದ್ಯಾರ್ಥಿಗಳು ಹೆಚ್ಚು ಸ್ಪಷ್ಟವಾಗಿ ಯೋಚಿಸಲು ಆಳವಾಗಿ ಭಾವನೆಗಳನ್ನು ಅನುಭವಿಸಲು ಮತ್ತು ಹೆಚ್ಚು ಧೈರ್ಯದಿಂದ ಹಾಗೂ ಕಾಳಜಿಯಿಂದ ಕ್ರಿಯೆಯಲ್ಲಿ ತೊಡಗಿಕೊಳ್ಳಲು ವಿಜ್ಞಾನವು ಸಹಾಯ ನೀಡಬಲ್ಲದೇ? ಅವರ ಬದುಕಿನ ಉದ್ದಕ್ಕೂ ಉಳಿಯುವಂತಹ ಪ್ರಾಕೃತಿಕ ಜಗತ್ತಿನ ಕುರಿತಾದ ಒಂದು ಕುತೂಹಲದ ಪ್ರಜ್ಞೆಯನ್ನು ಮತ್ತು ಸಂಬಂಧವನ್ನು ಕಂಡುಕೊಳ್ಳಲು ಅವರಿಗೆ ಅದು ಒತ್ತಾಸೆ ನೀಡಬಲ್ಲದೇ? ಎರಡನೆಯ ಅಂಶವೆಂದರೆ ನಾವು ಯಾವ ಸಮುದಾಯದ ಭಾಗವಾಗಿದ್ದೇವೋ ಅದರಿಂದ ಕಲಿಯುವ ಸಾಮರ್ಥ್ಯವಾಗಿರಬಹುದು. ನಮ್ಮ ಪ್ರಶ್ನೆಗಳನ್ನು ಹಂಚಿಕೊಳ್ಳುವ ಮತ್ತು ಅವು ನಮಗೆ ಏಕೆ ಮುಖ್ಯ ಎಂಬುದನ್ನು ಅರಿತುಕೊಳ್ಳುವ ಶಿಕ್ಷಕರು ಆ ಸಮುದಾಯದ ಭಾಗವಾಗಿರುತ್ತಾರೆ. ನಾವು ವಿದ್ಯಾರ್ಥಿಗಳು ಮತ್ತು ಪಠ್ಯಕ್ರಮದೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುವ ರೀತಿಯಲ್ಲಿ ಬದಲಾವಣೆ ತರುವುದಕ್ಕಾಗಿ ಸಣ್ಣಪುಟ್ಟ ಹೆಜ್ಜೆಗಳನ್ನಿಡಲು ಈ ಪ್ರಶ್ನೆಗಳು ಏಕೆ ತಾಳ್ಮೆಯನ್ನು, ವಿಶ್ವಾಸವನ್ನು ಬೇಡುತ್ತವೆ ಎಂಬುದನ್ನುಅವರು ಪ್ರಾಯಶಃ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು.
ನಮ್ಮ ಪ್ರಯತ್ನಗಳು ಮತ್ತು ಅನುಭವಗಳಿಂದ ಕಲಿಯಬಲ್ಲ ಜನ ಪ್ರಾಯಶಃ ಅವರೇನೇ. ಹಾಗೂ ಅವರ ಅನುಭವಗಳು ಹಾಗೂ ಪ್ರಯತ್ನಗಳಿಂದ ಪ್ರಾಯಶಃ ನಾವು ಬಹಳಷ್ಟನ್ನು ಕಲಿಯಬಹುದು. ಈ ಸಂಚಿಕೆಯಲ್ಲಿ ಅಂತಹ ಹಲವು ಅನುಭವಗಳಿವೆ. ಅವುಗಳಲ್ಲಿ ಮೂರನ್ನು ನಾನು ಎತ್ತಿ ತೋರಿಸಲು ಇಷ್ಟಪಡುತ್ತೇನೆ. ತಮ್ಮ ವಾಸ್ತವಿಕ ಜಗತ್ತಿನಲ್ಲಿ ಪ್ರಾಜೆಕ್ಟ್ ಕೇಂದ್ರಿತ ದೃಷ್ಟಿಕೋನದ ಅಂಶಗಳನ್ನು ವಿದ್ಯಾರ್ಥಿಗಳು ಎಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಿದರು ಎಂಬುದರಿಂದ ಸ್ಫೂರ್ತಿ ಹೊಂದಿ ತಾವು ವಿಜ್ಞಾನಿಗಳ ಜೀವನ ಕಥೆಗಳನ್ನು ಬರೆಯುವಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡದ್ದರ ಬಗ್ಗೆ ನರೇಶ್ ಕುಮಾರ್ ಸೇನ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅನೀಶ್ ಮೊಕಾಶಿ ಮತ್ತು ಶ್ರೀಜಾ ವೇಲಾಯುಧನ್ ಅವರು ತಮ್ಮ ತರಗತಿಯಲ್ಲಿ ಉಸೇನ್ ಬೋಲ್ಟ್ ಅವರ ದಾಖಲೆ ಮುರಿಯುವ ಓಟದ ಕುರಿತಾದ ವಿಡಿಯೋ ಅನ್ನು ಪ್ರದರ್ಶಿಸಬೇಕು ಎಂದು ನಿರ್ಧರಿಸಿದ್ದು, ಅವರ ವಿದ್ಯಾರ್ಥಿಗಳು ಸರಳ ರೇಖಾತ್ಮಕ ಚಲನೆಯ ಔಪಚಾರಿಕ ಪರಿಕಲ್ಪನೆಗಳೊಂದಿಗೆ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಕೊಳ್ಳುವಲ್ಲಿ ಹೇಗೆ ನೆರವಾಯಿತು ಎಂಬುದನ್ನು ನಮಗೆ ಹೇಳುತ್ತಾರೆ. ಮತ್ತು ಶಿವ್ ಪಾಂಡೆ ಅವರು ತಮ್ಮ ಪ್ರಶ್ನೆಗಳ ಆಯ್ಕೆಯು, ಯಾವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ದುಬಾರಿಯಲ್ಲದ ಪಿನ್ ಹೋಲ್ ಕ್ಯಾಮೆರಾ (ದ್ಯುತಿ ರಂಧ್ರ ಛಾಯಾಗ್ರಾಹಕವನ್ನು) ತಯಾರಿಸುವಲ್ಲಿ ಹಾಗೂ ವ್ಯವಸ್ಥಗೊಳಿಸುವಲ್ಲಿ ದೊರಕಿದ ಅನುಭವದ ಕುರಿತು ಹೆಚ್ಚು ಸೃಜನಶೀಲವಾಗಿ ಹಾಗೂ ವಿಮರ್ಶಾತ್ಮಕವಾಗಿ ಯೋಚಿಸಲು ದಾರಿ ತೋರಿಸಿತು ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.
ನೀವು ಮಾಧ್ಯಮಿಕ ಹಂತದ (6-8ನೇ ತರಗತಿ) ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಬೋಧಿಸುತ್ತೀರೇನು? ಶಿಕ್ಷಕರಾಗಿ ನಿಮ್ಮ ಬೆಳವಣಿಗೆಗೆ ಯಾವ ಅಂಶಗಳು ಬೆಂಬಲ ನೀಡುತ್ತವೆ? ಯಾವ ರೀತಿಯ ಪ್ರಶ್ನೆಗಳು ಅದನ್ನು ಪ್ರೇರೇಪಿಸುತ್ತವೆ? ಬೇರೆ ಶಿಕ್ಷಕರು ಅದಕ್ಕೆ ಯಾವ ಕಾಣಿಕೆ ನೀಡುತ್ತಾರೆ? ನಿಮ್ಮ ಬೆಳವಣಿಗೆಯು ಯಾವ ರೀತಿಯಲ್ಲಿ ನಿಮ್ಮ ತರಗತಿ ಬೋಧನೆಯನ್ನು ಬದಲಾಯಿಸಿದೆ? ನಿಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಅದು ಹೇಗೆ ಬದಲಾಯಿಸಿದೆ? ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಚಿತ್ರಾ ರವಿ
ಸಂಪಾದಕರು