ನೆರೆಹೊರೆ ಪಕ್ಷಿಗಳ ಅವಲೋಕನ: ಧ್ಯಾನನಿರತ ಕಬ್ಬಾರೆ

ಅನುವಾದ: ಚಂದ್ರಿಕಾ ವಿಜಯೇಂದ್ರ l ಪರಿಶೀಲನೆ: ಸ್ಮಿತಾ ಪಿ. ಜಿ.

ವೈಜ್ಞಾನಿಕ ಪರಿಕಲ್ಪನೆಗಳಲ್ಲಿ ತೊಡಗಿಸಿಕೊಳ್ಳಲು ಕಥೆ ಹೇಳುವುದೊಂದು ಪರಿಣಾಮಕಾರಿ ಮಾರ್ಗವಾಗಿದೆ. ನಮ್ಮ ಸುತ್ತಮುತ್ತಲಿನ ಪಕ್ಷಿಗಳನ್ನು ಇನ್ನಷ್ಟು ಗಮನವಿಟ್ಟು ನೋಡುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಈ ಕಬ್ಬಾರೆ ಹಾಗೂ ರೈತನ ಕಥೆಯನ್ನು ನಾವು ಬಳಸಬಹುದೇ? ಜೀವವೈವಿಧ್ಯತೆ ಹಾಗೂ ಜೀವನೋಪಾಯದ ನಡುವಿನ ಸ್ಥಳೀಯ ಕೊಂಡಿಯನ್ನು ಅನ್ವೇಷಿಸಲು ಇದನ್ನೇನಾದರೂ ಬಳಸಬಹುದೇ?

ನಾನೊಬ್ಬ ರೈತ. ಭೂತಾನ್‌ನ ಹೃದಯ ಭಾಗದಲ್ಲಿರುವ ಬುಮ್ತಂಗ್‌ ಕಣಿವೆಯಲ್ಲಿದ್ದೇನೆ. ಬುಮ್ತಂಗ್‌ ಕಣಿವೆ ಪ್ರಾಕೃತಿಕ ಸೌಂದರ್ಯ ಹಾಗೂ ವಿಶಾಲವಾದ ಹಸಿರು ಕಾಡುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಬೆಟ್ಟ-ಗುಡ್ಡ, ನದಿ, ಪಕ್ಷಿ ಹಾಗೂ ಜಗಮಗಿಸುತ್ತಿರುವ ಅನಂತ ಸೌಂದರ್ಯವನ್ನು ಗಂಟೆಗಟ್ಟಲೆ ಪ್ರಶಂಸಿಸುತ್ತಾ ಕುಳಿತುಕೊಳ್ಳಬಹುದು.

ನಿತ್ಯ ನಾನು ಮೀನು ಹಿಡಿಯಲು ಹೋಗುತ್ತೇನೆ. ಅದೇ ನನ್ನ ಜೀವನೋಪಾಯಕ್ಕೆ ಆಧಾರ. ನದಿಯಲ್ಲಿ ಗಾಳಹಾಕಿ ಮೀನು ಹಿಡಿಯುವವರಿಂದ ಅನತಿ ದೂರದಲ್ಲಿರಲು ಇಚ್ಛಿಸುತ್ತೇನೆ. ಇದರಿಂದ ಹೆಚ್ಚು ಮೀನುಗಳನ್ನು ಹಿಡಿಯಬಹುದು. ಜೊತೆಗೆ ಪ್ರಕೃತಿಯ ನಿಶಬ್ದ ಸೌಂದರ್ಯವನ್ನೂ ಸವಿಯಬಹುದು.

ಮೀನು ಹಿಡಿಯುವ ಮೆಚ್ಚಿನ ಸ್ಥಳ ನನ್ನ ಹಳ್ಳಿಯಿಂದ ಐದು ಕಿ.ಮೀ. ದೂರದಲ್ಲಿದೆ, ಹಳ್ಳಿಯ ಚೌಕದಲ್ಲಿರುವ ದೇವಸ್ಥಾನದ ದಕ್ಷಿಣ ದಿಕ್ಕಿಗೆ. ಕಾಡಿನ ಮೂಲಕ ಹಾದುಹೋಗಿ ನದೀಪಾತ್ರವನ್ನು ಸೇರುವ ದಾರಿಯನ್ನು ನಾನು ಹಿಡಿಯುತ್ತೇನೆ. ನಂತರ ನದಿದಂಡೆಯುದ್ದಕ್ಕೂ ಮೂರು ಕಿ.ಮೀ ನಡೆಯುತ್ತೇನೆ.

ಕಲ್ಲುಗಳ ಜೋಡಣೆಯಿಂದ ನಾನು ಈ ಜಾಗವನ್ನು ಗುರುತಿಸುತ್ತೇನೆ. ಪಕ್ಷಿಗಳು ಕೂತುಕೊಳ್ಳಲು ಇವು ಯೋಗ್ಯವಾಗಿವೆ. ಬಿಸಿಲು ಹಾಗೂ ಮಳೆಯಿಂದ ನನ್ನನ್ನು ರಕ್ಷಿಸುವ ನನ್ನ ಸ್ನೇಹಿತ: ಬೃಹತ್‌ ಅತ್ತಿ ಮರ. ಈ ಮರದ ಕೆಳಗಿರುವ ಒಂದು ಕಲ್ಲನ್ನು ಆಯ್ಕೆ ಮಾಡಿದ್ದೇನೆ.

ಮೀನು ಹಿಡಿಯುವಾಗ ನಾನು ಒಬ್ಬನೇ ಇರುವುದು ಅಪರೂಪ. ನದಿಯ ಆ ಬದಿಯಲ್ಲಿ ಮೀನು ಹಿಡಿಯಲು ಬರುವ ಇನ್ನೋರ್ವ ಅಪರಿಚಿತನೊಂದಿಗೆ ನಾನು ಮೀನು ಹಿಡಿಯುತ್ತೇನೆ. ಅದು ಕಬ್ಬಾರೆ. ನಾನು ಬಂದಾಗಲೆಲ್ಲಾ ಅದೂ ಬಂದಿರುತ್ತದೆ. ಇದು ಕಾಕತಾಳೀಯವಾಗಿರಬಹುದು. ಇಬ್ಬರ ಉಪಸ್ಥಿತಿ ಇಬ್ಬರಿಗೂ ಗೊತ್ತಿರುತ್ತದೆ, ಆದರೂ ನಮ್ಮ ನಮ್ಮ ಕೆಲಸದಲ್ಲಿ ಮುಳುಗಿರುತ್ತೇವೆ. ನಾನೆಂದೂ ಅದರೊಂದಿಗೆ ವ್ಯವಹರಿಸಿಲ್ಲ, ಆಹಾರವನ್ನೂ ಕೊಟ್ಟಿಲ್ಲ. ಅದು ಕೂಡ ನನ್ನ ಬಳಿಗೆ ಎಂದೂ ಬಂದಿಲ್ಲ. ಎಣಿಕೆ ಮಾಡಲಾಗದಷ್ಟು ಬಾರಿ ನಾನು ಕಬ್ಬಾರೆಯನ್ನು ನೋಡಿದ್ದೇನೆ. ಒಂದಿಂಚೂ ಅಲ್ಲಾಡದೇ, ಗಂಟೆಗಟ್ಟಲೆ ಅದು ನೀರಿನಲ್ಲೇ ನಿಂತಿರುತ್ತದೆ. ಜಾಗವನ್ನೂ ಬದಲಾಯಿಸುವುದಿಲ್ಲ (ಚಿತ್ರ 1). ಮೀನಿಗಾಗಿ ಕಾಯುತ್ತಿರುತ್ತದೆ. ಪ್ರಾಯಶಃ ತನ್ನ ಶಕ್ತಿಯನ್ನು ಉಳಿಸಲು. ನನ್ನ ತಲೆಯಲ್ಲಿ ಅದು ʼಧ್ಯಾನನಿರತ ಕಬ್ಬಾರೆʼ. ಮುಂದೊಮ್ಮೆ ನನ್ನ ಮಕ್ಕಳಿಗೆ ಇದರ ಬಗ್ಗೆ ಹೇಳುತ್ತೇನೆ.

Observing neighborhood fig 1
ಚಿತ್ರ 1. ಧ್ಯಾನನಿರತ ಕಬ್ಬಾರೆಯನ್ನು ನೀವು ಗುರುತಿಸಬಲ್ಲಿರೇ? ಕೃಪೆ: ಹೇಮಲ್‌ ನಾಯಕ್‌. ಪರವಾನಗಿ: ಕೃತಿಸ್ವಾಮ್ಯ ಹೇಮಲ್‌ ನಾಯಕ್‌ ಅವರದು. ಅವರ ಅನುಮತಿಯಿಂದ ಇಲ್ಲಿ ಬಳಸಲಾಗಿದೆ.

ಮೀನು ಹಿಡಿಯುವ ಅದರ ದಿನಚರಿಯನ್ನು ನಾನು ಪ್ರಶಂಸಿಸುತ್ತೇನೆ. ನೀರಿನಲ್ಲಿ ಮೀನುಗಳ ಓಡಾಟವನ್ನು ಅದು ಯಾವಾಗ ಕಂಡುಹಿಡಿಯುತ್ತದೆ ಎಂದು ನನಗೆ ಗೊತ್ತು. ಅದು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಬೇಟೆಯತ್ತ ಮುಂದುವರೆಯುತ್ತದೆ. ಕೆಲವೊಮ್ಮೆ ತುಂಬಾ ವೇಗವಾಗಿರುತ್ತದೆ/ತ್ವರಿತವಾಗಿರುತ್ತದೆ. ಯಾವ ಮೀನಿನ ಹಿಂದೆ ಇದು ಬಿದ್ದಿದೆಯೋ ಅದಕ್ಕೆ ಹೇಗನ್ನಿಸಿರಬಹುದೋ! ದೈತ್ಯಾಕಾರದ ಎರಡು ಚಾಪ್‌ಸ್ಟಿಕ್‌ಗಳು ಅತೀ ವೇಗದಲ್ಲಿ ನಿಮ್ಮ ಕಡೆ ಬರುತ್ತಿರುವುದನ್ನು ಊಹಿಸಿಕೊಳ್ಳಿ!

ಉಳಿದ ಸಮಯದಲ್ಲಿ, ನದಿಯ ಒಂದು ನಿರ್ದಿಷ್ಟ ಸ್ಥಳಕ್ಕೆ ಮಂದಗತಿಯಲ್ಲಿ ಹೋಗುವುದನ್ನು ನೋಡಿದ್ದೇನೆ. ಅಕಸ್ಮಾತ್‌ ಅಲ್ಲಿ ಯಾವುದಾದರೂ ಮೀನಿದ್ದರೆ ಅದನ್ನು ಹೆದರಿಸದೇ ಆದಷ್ಟೂ ಅದರ ಹತ್ತಿರಕ್ಕೆ ಹೋಗಲು ಪ್ರಯತ್ನಿಸುವುದು. ಒಮ್ಮೆ ಅದರ ಸಮೀಪಕ್ಕೆ ಹೋಯಿತೆಂದರೆ ಸಾಕು, ಅದರ ಕೊಕ್ಕಿನಿಂದ ಕ್ಷಿಪ್ರವಾಗಿ ಬೇಟೆಯನ್ನು ಹೊಡೆದು ಬಂಧಿಯನ್ನಾಗಿಸುತ್ತದೆ.

ಆದರೆ ಕಬ್ಬಾರೆ ಹಕ್ಕಿ ಸದಾ ಯಶಸ್ವಿಯಾಗುವುದಿಲ್ಲ. ಒಮ್ಮೊಮ್ಮೆ ಅದು ತನ್ನ ಗುರಿ ತಪ್ಪುವುದರಿಂದ ಬೇಟೆಯೂ ತಪ್ಪಿಸಿಕೊಳ್ಳುತ್ತದೆ. ಇನ್ನೂ ಕೆಲವು ಬಾರಿ ಮೀನುಗಳು ಅದರ ಕಣ್ಣಿಗೆ ಬೀಳುವುದಿಲ್ಲ. ಅದೊಂದೇ ಕಷ್ಟ ಪಡುತ್ತಿರುವುದಿಲ್ಲ. ನನಗೂ ಕೂಡ ಕೆಲವೊಮ್ಮೆ ಮೀನುಗಳು ಸರಿಯಾಗಿ ಸಿಗುವುದಿಲ್ಲ. ಪರ್ವತಗಳ ಹಿಮ ಬಹಳ ಬೇಗ ಕರಗುತ್ತಿದೆ. ನದಿಯ ಪ್ರವಾಹ ಹಿಂದಿಗಿಂತ ಬಹು ರಭಸವಾಗುತ್ತಿದೆ. ಮೀನುಗಾರಿಕೆಯೂ ಹೆಚ್ಚಾಗುತ್ತಿದೆ. ನದಿಪಾತ್ರದ ಸುತ್ತಮುತ್ತಲಿನ ಸ್ಥಳಗಳೂ ಬದಲಾಗುತ್ತಿವೆ. ಸಾಮಾನ್ಯವಾಗಿ, ಮೀನುಗಳು ನಮ್ಮ ಕಣ್ಣಿಗೆ ಬೀಳಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಎಷ್ಟು ಸಮಾಧಾನ ಹಾಗೂ ತಾಳ್ಮೆಯಿಂದ ಕಬ್ಬಾರೆ ಕಾಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನೂ ಅದನ್ನೇ ಪ್ರಯತ್ನಿಸುತ್ತೇನೆ. ಮೀನು ಹಿಡಿಯಲು ಕಬ್ಬಾರೆ ಹಕ್ಕಿಗೆ ಬೇರೆ ಸ್ಥಳಗಳೇನಾದರೂ ಇವೆಯೇ! ಇದು ನನ್ನ ಅನುಮಾನ (ಬಾಕ್ಸ್‌ 1).

ಬಾಕ್ಸ್‌ 1. ಪಠ್ಯಕ್ರಮದೊಂದಿಗೆ ಸಂಬಂಧ:

ಪೂರ್ವಸಿದ್ಧತಾ ಹಂತ (ಶ್ರೇಣಿ III-V)ದ ಪರಿಸರವಿಜ್ಞಾನ ಪಠ್ಯಪುಸ್ತಕದಲ್ಲಿರುವ ಜೀವಜಗತ್ತಿನ ಕಲಿಕೆಯೊಂದಿಗೆ ಹಾಗೂ ಮಾಧ್ಯಮಿಕ ಹಂತ (ಶ್ರೇಣಿ VI-VIII) ವಿಜ್ಞಾನದ ನೈಜ ಜಗತ್ತಿನೊಂದಿಗೆ ವಿದ್ಯಾರ್ಥಿಗಳು ಸಂಬಂಧ ಕಲ್ಪಿಸಿಕೊಳ್ಳಲು ಈ ಕಥೆ ಹಲವು ಮಾರ್ಗದಲ್ಲಿ ಸಹಕಾರಿಯಾಗಿದೆ (ಚಟುವಟಿಕೆ ಹಾಳೆ I: ಮೀನು ಹಿಡಿಯುವ ಪಕ್ಷಿಗಳನ್ನು ಗಮನಿಸಿ, ಚಟುವಟಿಕೆ ಹಾಳೆ II: ನೆರೆಹೊರೆಯ ಪಕ್ಷಿಗಳ ದಾಖಲೆಗಳಲ್ಲಿ ಬದಲಾವಣೆ, ಶಿಕ್ಷಕರ ಗೈಡ್‌: ಚಟುವಟಿಕೆ ಹಾಳೆ I ಮತ್ತು II, ಚಟುವಟಿಕೆ ಹಾಳೆ III: ಹಕ್ಕಿ-ಬಾನಿಗೆ ಪಕ್ಷಿಗಳಿಗೆ ಆಹ್ವಾನ ಹಾಗೂ ಶಿಕ್ಷಕರ ಗೈಡ್‌: ಚಟುವಟಿಕೆ ಹಾಳೆ III). ಯಾವುದನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಶಾಲಾ ಶಿಕ್ಷಣದ ಧ್ಯೇಯವೆಂದು ವಿವರಿಸುತ್ತದೆಯೋ ಅದನ್ನು ಆದೇಶಿಸದೇ, ಸೌಮ್ಯವಾಗಿ ಹೇಳುತ್ತದೆ: “ವಿವೇಚನೆಯಿಂದ ಕೂಡಿದ ಚಿಂತನೆ ಹಾಗೂ ಕ್ರಮಗಳನ್ನು ಮೈಗೂಡಿಸಿಕೊಂಡಿರುವ, ಉತ್ತಮ ನೈತಿಕ ಮೌಲ್ಯಗಳೊಂದಿಗೆ ,ಕನಿಕರ ಹಾಗೂ ಸಹಾನುಭೂತಿ, ಧೈರ್ಯ ಹಾಗೂ ದಿಟ್ಟತೆ, ವೈಜ್ಞಾನಿಕ ಮನಃಸ್ಥಿತಿ, ಕ್ರಿಯಾತ್ಮಕ ಕಲ್ಪನೆಯಿಂದ ಕೂಡಿದ ಒಳ್ಳೆಯ ಮನುಷ್ಯರನ್ನು ಬೆಳೆಸುವುದು ಶಿಕ್ಷಣ ವ್ಯವಸ್ಥೆಯ ಉದ್ದೇಶವಾಗಿದೆ1. ಶಿಕ್ಷಕರು ಇದನ್ನು “ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023 ವಿವರಿಸುವಂತೆ ಪ್ರಭಾವೀ ಅಂಶಗಳನ್ನೊಳಗೊಂಡ ಸಮಾಜ ಕಟ್ಟಲು ಬಳಸಬಹುದು: “ಸಹಾನುಭೂತಿ ಅಥವಾ ಕನಿಕರ ತೋರುವುದು ಕೇವಲ ಮೌಲ್ಯಗಳಾಗಲೀ ಅಥವಾ ಅಳವಡಿಕೆಗಾಗಲೀ ಅಲ್ಲ; ಈ ಸಾಮರ್ಥ್ಯಗಳು ಬೆಳೆಯುವುದು ವಿವೇಚನೆಯಿಂದ ಕೂಡಿದ ಅಭ್ಯಾಸದಿಂದ”.1 ನಿರ್ದಿಷ್ಟವಾಗಿ ಹೇಳುವುದಾದರೆ, ಈ ಕಥೆಯಲ್ಲಿ ಬರುವ ಚಟುವಟಿಕೆಗಳು ಹಾಗೂ ಚರ್ಚೆಗಳು NCF-SE 2023ಯ ಪಠ್ಯಕ್ರಮದ ಕೆಳಕಂಡ ಗುರಿಯನ್ನು ತಲುಪಲು ಸಹಕಾರಿಯಾಗಿದೆ.”

  • ಪೂರ್ವಸಿದ್ಧತಾ ಹಂತ:
  • CG-2: (ವಿದ್ಯಾರ್ಥಿ) ಅವಲೋಕನ ಹಾಗೂ ಅನುಭವಗಳ ಮೂಲಕ ತಮ್ಮ ಪರಿಸರದಲ್ಲಿರುವ ಪರಸ್ಪರಾವಲಂಬನೆಯನ್ನು ಅರಿತುಕೊಂಡು ʼವಸುದೈವ ಕುಟುಂಬಕಂʼ ಎಂಬ ಆಲೋಚನೆಯನ್ನು ಪುರಸ್ಕರಿಸುತ್ತಾರೆ. ನಿರ್ದಿಷ್ಟವಾಗಿ, ವಿದ್ಯಾರ್ಥಿಗಳ ಸಾಮರ್ಥ್ಯ ಬೆಳವಣಿಗೆಗೆ ಸಹಕಾರಿಯಾಗಿದೆ: “ಪರಿಸರ, ತಮ್ಮ ಕುಟುಂಬ ಹಾಗೂ ಸಮುದಾಯದಲ್ಲಾಗಿರುವ ಬದಲಾವಣೆಗಳನ್ನು ತಮ್ಮ ಹಿರಿಯರು ಹೇಳಿದ ಹಾಗೂ ಸ್ಥಳೀಯ ಕಥೆಗಳೊಂದಿಗೆ (ಕೆಲಸ ಕಾರ್ಯ, ಆಹಾರ- ವಿಹಾರ, ಸಂಪನ್ಮೂಲಗಳು, ಆಚರಣೆಗಳು, ಮಾತು ಕಥೆಗಳಲ್ಲಾಗಿರುವ ಬದಲಾವಣೆಗಳು) ಹೋಲಿಸಿ ನೋಡುವುದು”.
  • CG- 4: (ವಿದ್ಯಾರ್ಥಿ) ಸಾಮಾಜಿಕ ಹಾಗೂ ಸ್ವಾಭಾವಿಕ ಪರಿಸರದೊಂದಿಗೆ ಸೂಕ್ಷ್ಮತೆಯನ್ನು ಬೆಳೆಸಿಕೊಳುತ್ತಾರೆ. ನಿರ್ದಿಷ್ಟವಾಗಿ, ವಿದ್ಯಾರ್ಥಿಗಳಿಗೆ “ಮರ-ಗಿಡ, ಪ್ರಾಣಿ ಹಾಗೂ ಪಕ್ಷಿಗಳ ಅಗತ್ಯ (ನೀರು, ಮಣ್ಣು, ಆಹಾರ, ಕಾಳಜಿ) ಹಾಗೂ ಅವುಗಳಿಗೆ ಹೇಗೆ ಆಸರೆಯಾಗಿರಬಹುದೆಂದು ಗುರುತಿಸಿ ಹೇಳುವ ಸಾಮರ್ಥ್ಯವನ್ನು ಅದು ನೀಡಬಲ್ಲದು.”1
  • ಮಾಧ್ಯಮಿಕ ಹಂತ: CG-3: ವೈಜ್ಞಾನಿಕ ಭಾಷೆಯಲ್ಲಿ ಜೀವಜಗತ್ತನ್ನು ಅನ್ವೇಷಿಸುತ್ತಾರೆ. ವಿದ್ಯಾರ್ಥಿಗಳಿಗೆ ಕೆಳಕಂಡ ಸಾಮರ್ಥ್ಯವನ್ನು ಅಭಿವೃದ್ದಿಗೊಳಿಸಿ ಅಭ್ಯಸಿಸುವಲ್ಲಿ ಸಹಕಾರಿಯಾಗಿದೆ:
  • “ಸುತ್ತಮುತ್ತಲಿರುವ ವೈವಿಧ್ಯಮಯ ಜೀವಂತ ವಸ್ತುಗಳನ್ನು ವಿವರಿಸುವುದು (ಕೀಟಗಳು, ಎರೆಹುಳು, ಬಸವನ ಹುಳು, ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಜೇಡಗಳು, ವಿವಿಧ ಬಗೆಯ ಗಿಡಗಳು, ಶಿಲೀಂಧ್ರ)’’
  • “ಅವಲಂಬನೆ ಹಾಗೂ ಪ್ರತಿಕ್ರಿಯೆಗಳ ಆಧಾರದ ಮೇಲೆ ಜೀವಿಗಳ ಹಾಗೂ ಪರಿಸರದ ನಡುವೆಯ ಸಂಬಂಧಗಳ ವಿನ್ಯಾಸಗಳನ್ನು ವಿಶ್ಲೇಷಿಸುವುದು.’’1

ಎಂಟು ವರ್ಷಗಳ ನಂತರ…….

ಇದೇ ದಿನಚರಿಯನ್ನು ಹಲವು ವರ್ಷ ಪಾಲಿಸಿದ ನಂತರ, ನಾನು ಬೇರೆಯದರತ್ತ ಗಮನ ಹರಿಸಿದೆ. ವ್ಯಾಪಾರವನ್ನು ಪ್ರಾರಂಭಿಸಿದೆ ಹಾಗೂ ಮದುವೆ ಮಾಡಿಕೊಂಡೆ. ನನಗೆ ಎರಡು ಮಕ್ಕಳು: ಟಾಶಿ ಮತ್ತು ನೂಬ. ನನ್ನ ಮೀನುಗಾರಿಕೆಯ ದಿನಗಳ ಬಗ್ಗೆ ನಾನವರಿಗೆ ಹೇಳಿದೆ. ಆ ಜಾಗವನ್ನು ನೋಡಲು ಅವರು ಉತ್ಸುಕರಾಗಿದ್ದಾರೆ. ಒಂದು ದಿನ ನಾನು ನನ್ನ ಮೆಚ್ಚಿನ ಹಳೆಯ ಜಾಗಕ್ಕೆ ಪುನಃ ಹೋಗಲು ನಿರ್ಧರಿಸಿದೆ. ಟಾಶಿ ಹಾಗೂ ನೂಬರನ್ನು ಕರೆದುಕೊಂಡು ಹೋದೆ. ನನ್ನ ಹಳೆಯ ಸ್ನೇಹಿತರಾದ ಕಲ್ಲುಗಳು ಹಾಗೂ ಅತ್ತಿ ಮರ ಅಲ್ಲೇ ಇವೆ. ಬದಲಾಗದೆ, ಸ್ವಾಗತಿಸುತ್ತಾ. ಆದರೆ ಏನೋ ಸರಿಯಿಲ್ಲ ಎಂದೆನಿಸುತ್ತಿದೆ. ನನಗೆ ಕಬ್ಬಾರೆ ಹಕ್ಕಿ ಕಾಣಿಸಲಿಲ್ಲ. ಮನೆಗೆ ವಾಪಸ್‌ ಬಂದೆವು ಹಾಗೂ ಅದರ ಬಗ್ಗೆ ಅಷ್ಟು ಯೋಚಿಸಲಿಲ್ಲ.

ನನ್ನ ಜಾಗಕ್ಕೆ ಮತ್ತೆ ಹೋಗಲು ಪ್ರಾರಂಭಿಸಿದೆ. ಹಲವು ದಿನಗಳು ಕಳೆಯಿತು. ಆದರೂ ನನಗೆ ಕಬ್ಬಾರೆ ಹಕ್ಕಿ ಕಂಡುಬರಲಿಲ್ಲ. ಅವನಿಗೆ ಛಳಿಗಾಲ ತೊಂದರೆ ಕೊಟ್ಟೀತೇನೋ. ಒಂದು ದಿನ, ನಾನು ಹಾಗೂ ಮಕ್ಕಳು ತಿಂಪು ನಗರದ ಪುಸ್ತಕದ ಅಂಗಡಿಯೊಂದಕ್ಕೆ ಹೋದೆವು. ಅಂಗಡಿಯ ಒಂದು ವಿಭಾಗದಲ್ಲಿ ವನ್ಯಜೀವಿ ಪುಸ್ತಕಗಳಿವೆ. ನಾಪತ್ತೆಯಾದ ಗೆಳೆಯನ ಬಗ್ಗೆ ನನ್ನ ಆಸಕ್ತಿ.

ಇಷ್ಟು ವರ್ಷಗಳಲ್ಲಿ ಅದರ ಬಗ್ಗೆ ಓದಬೇಕೆಂದು ನನಗೆಂದೂ ಅನ್ನಿಸಿರಲಿಲ್ಲ. ಅನೇಕ ಬಾರಿ ನಾನದನ್ನು ನದಿಯ ಪಕ್ಕ ಬಿಸಿಲಿನಲ್ಲಿ ಹಾಯಾಗಿದ್ದುದನ್ನು ಕಂಡಿದ್ದೆ. ಅದು ಬೇಸಿಗೆಯಲ್ಲಿ ಹಾಗೂ ಛಳಿಗಾಲದಲ್ಲಿ ಹೇಗೆ ಕಾಣುತ್ತದೆ ಎಂದು ನನಗೆ ಗೊತ್ತು. ಹಾರಾಟದಲ್ಲಿ ಅದು ಎಷ್ಟು ಚೆಂದ ಕಾಣಿಸುತ್ತದೆಂದು ಹಾಗೂ ಗಂಟೆಗಟ್ಟಲೆ ನದಿಯಲ್ಲಿ ನಿಂತು ಧ್ಯಾನಿಸುವಾಗ ಅದರ ಶಾಂತತೆಯನ್ನು ನೆನಪಿಟ್ಟಿದ್ದೇನೆ.

ʼಭೂತಾನಿನ ಪಕ್ಷಿಗಳುʼ ಪುಸ್ತಕದಲ್ಲಿ ನಾನು ಅದರ ಬಗ್ಗೆ ಹುಡುಕಿದೆ. ಆದರೆ ನನಗೆ ಅದು ಅಲ್ಲಿ ಸಿಗಲಿಲ್ಲ. ನೇರಳೆ ಬಕ, ಬೂದು ಬಕ, ಕೊಕ್ಕರೆ ಹಾಗೂ ಕೊಳದ ಬೆಳ್ಳಕ್ಕಿಯ ಬಗ್ಗೆ ಪುಸ್ತಕ ಮಾತನಾಡಿತು. ಆದರೆ ನಾನು ಯಾವುದನ್ನು ಧ್ಯಾನನಿರತ ಬಕವೆಂದು ಕರೆಯುತ್ತೇನೋ ಅದರ ಬಗ್ಗೆ ಅಲ್ಲ.

ಪ್ರಾಯಶಃ ಆ ಪಕ್ಷಿ ಬೇರೆ ವಿಭಾಗದಲ್ಲಿರಬಹುದು. ವಿಷಯಸೂಚಿಯನ್ನು ಕೂಲಂಕಷವಾಗಿ ನೋಡಿದೆ. ಅಪರೂಪ ಜಾತಿಗಳ ಬಗ್ಗೆ ಪುಟ ಸಂಖ್ಯೆ 339 ರಲ್ಲಿ ಉಲ್ಲೇಖವಿದೆ. ನಾನು ಆ ಪುಟಕ್ಕೆ ತಿರುಗಿಸುತ್ತಿದ್ದಂತೆ ಅದೋ ಅಲ್ಲಿದೆ! ಅಂತೂಇಂತೂ! ಬೂದು ಬಣ್ಣದ ಮೇಲ್ಭಾಗ ಹೊಂದಿರುವ ಅಚ್ಚ ಬಿಳಿಯ ಹೊಟ್ಟೆ ಹಾಗೂ ಕೊರಳು. ಓದುವುದನ್ನು ಮುಂದುವರೆಸಿದೆ……..ಅದರ ವಾಸಸ್ಥಾನದ ವಿವರಣೆ ಹಾಗೂ ನಡವಳಿಕೆ ಟಿಪ್ಪಣಿಗಳೆರಡೂ ಒಂದಕ್ಕೊಂದು ಹೊಂದಿಕೊಂಡಿತು (ಚಿತ್ರ 2). ಅದನ್ನು ಅವರು ʼಬಿಳಿ ಹೊಟ್ಟೆಯ ಬಕʼ ಅಥವಾ ʼಇಂಪಿರಿಯಲ್‌ ಬಕʼ ಎನ್ನುತ್ತಾರೆ. ಅದರ ವೈಜ್ಞಾನಿಕ ಹೆಸರು ಆರ್ಡಿಯ ಇನ್ಸಿಗ್ನಿಸ್‌ (Ardea insignis).2,3

Observing neighborhood fig 2
ಚಿತ್ರ 2: ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನ ನಮ್ದಾಫ ರಾಷ್ಟ್ರೀಯ ಉದ್ಯಾನದಲ್ಲಿರುವ ಬಿಳಿಯ- ಹೊಟ್ಟೆ ಬಕ (ಆರ್ಡಿಯಾ ಇನ್ಸಿಗ್ನಿಸ್‌). ಕೃಪೆ: Rajkimar99, Wikimedia Commons. URL: https://en.wikipedia.org/wiki/File:WHITEBELLIED-HERON.jpg. ಪರವಾನಗಿ: CC BY-SA 4.0 International Deed.

ಟಾಶಿ ಮತ್ತು ನೂಬಗೆ ಪುಸ್ತಕದಲ್ಲಿದ್ದ ಪಕ್ಷಿಯ ಚಿತ್ರವನ್ನು ತೋರಿಸಿದೆ. ನಾನು ನಿಮಗೆ ಯಾವಾಗಲೂ ಹೇಳುತ್ತಿದ್ದ ಮೀನು ಹಿಡಿಯುವ ಜೊತೆಗಾರನೆಂದು ಅವರಿಗೆ ಪರಿಚಯಿಸಿದೆ. ಪಕ್ಷಿ ಹೇಗೆ ಕಾಣುತ್ತದೆಯೆಂದು ಇದೇ ಮೊದಲ ಬಾರಿ ನಾನು ಅವರಿಗೆ ತೋರಿಸಿದ್ದು. ಪಕ್ಷಿಯ ಹೆಸರಿನ ಬಳಿ * ಚಿಹ್ನೆಯನ್ನು ನೂಬ ತೋರಿಸಿದಳು. ಅದು ಅಡಿಬರಹದತ್ತ ಕೊಂಡೊಯ್ಯಿತು:

**2000 ಇಸವಿಯಲ್ಲಿ ಜೀವಿಯ ಕಡೆಯ ದಾಖಲಾತಿ. ವಾಸಸ್ಥಾನದ ನಾಶ ಹಾಗೂ ಬೇಟೆಯಿಂದ ವಿನಾಶದ ಸಾಧ್ಯತೆ.

ಪ್ರಮುಖ ಕಲಿಕೆಗಳು

ನೆರೆಹೊರೆ ಪಕ್ಷಿಗಳ ಅವಲೋಕನ: ಧ್ಯಾನನಿರತ ಕಬ್ಬಾರೆ
  • ಮೀನು ಹಿಡಿಯುವುದರಿಂದ ಜೀವನ ನಡೆಸುತ್ತಿದ್ದ ರೈತನೊಬ್ಬನ ಕಥೆಯಿದು. ಅವನು ಮೀನು ಹಿಡಿಯುತ್ತಿದ್ದ ಸ್ಥಳವನ್ನು ಹಂಚಿಕೊಳ್ಳುತ್ತಿದ್ದ ಕಬ್ಬಾರೆ ಹಕ್ಕಿಯನ್ನು ಗಮನಿಸಿ ಅದರೊಂದಿಗೆ ಅನುಬಂಧ ಬೆಸೆದುಕೊಳ್ಳುತ್ತಾನೆ. ತರಗತಿಗಳಲ್ಲಿ ನಾವು ವಿದ್ಯಾರ್ಥಿಗಳಿಗೆ ಪರಿಸರದಲ್ಲಿರುವ ಇತರೆ ಜೀವಿಗಳ ಬಗ್ಗೆ ಆಲೋಚಿಸಲು ಹಾಗೂ ಅವುಗಳೊಂದಿಗೆ ಹೇಗೆ ಬೆಸೆದುಕೊಳ್ಳಬೇಕು ಎನ್ನುವುದಕ್ಕೆ ಇದನ್ನು ಉಪಯೋಗಿಸಿಕೊಳ್ಳಬಹುದು.
  • ಈ ಕಥೆಯಲ್ಲಿರುವ ರೈತ ಅವನು ಗಮನಿಸಿದ ಕಬ್ಬಾರೆ ಹಕ್ಕಿಯ ಲಕ್ಷಣ ಹಾಗೂ ಆಹಾರ ಪದ್ಧತಿಯನ್ನು ಹಂಚಿಕೊಂಡಿದ್ದಾನೆ. ತಮ್ಮ ಸುತ್ತಮುತ್ತಲಿರುವ ಪಕ್ಷಿಗಳನ್ನು ಗಮನಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುವುದರಿಂದ ಅವರು ತಾವೇ ಜೀವಜಗತ್ತಿನ ವೈವಿಧ್ಯತೆಯನ್ನು ಆವಿಷ್ಕರಿಸಿ ಪ್ರಶಂಸಿಸಲು ಅವಕಾಶ ಕೊಟ್ಟಂತಾಗುತ್ತದೆ.
  • ಮನುಷ್ಯನ ಚಟುವಟಿಕೆಗಳು ಹೇಗೆ ಅವನ ಹಾಗೂ ಕಬ್ಬಾರೆ ಹಕ್ಕಿಯ ಮೀನು ಹಿಡಿಯುವ ಸಾಮರ್ಥ್ಯವನ್ನು ಪ್ರಭಾವಿಸುತ್ತದೆಯೆಂದು ಈ ಕಥೆಯಲ್ಲಿರುವ ರೈತ ಹಂಚಿಕೊಂಡಿದ್ದಾನೆ. ಈ ಪ್ರಪಂಚದಿಂದ ಕಬ್ಬಾರೆ ಹಕ್ಕಿಯ ಜಾತಿ ಹೇಗೆ ಕಣ್ಮರೆಯಾಗುತ್ತಿದೆಯೆಂದು ನಾವೂ ತಿಳಿದುಕೊಂಡಂತಾಗುತ್ತದೆ. ಜೀವಿಗಳ ಪರಸ್ಪರಾವಲಂಬನೆ ಹಾಗೂ ನಮ್ಮ ಪರಿಸರದಲ್ಲಿರುವ ಇತರೆ ಜೀವಿಗಳು ಹಾಗೂ ಮನುಷ್ಯರ ಜೀವನದಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚಿಸುವಂತೆ ವಿದ್ಯಾರ್ಥಿಗಳ ಗಮನ ಸೆಳೆಯಲು ಇದು ಸಹಕಾರಿಯಾಗಿದೆ.

ಕೃತಜ್ಞತೆಗಳು

ಹೇಮಲ್‌ ಅವರನ್ನು ತಮಗೆ ಪರಿಚಯಿಸಿದ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್‌ ಆಫ್‌ ಇಕಲಾಜಿಕಲ್‌ ಸೈನ್ಸಸ್‌ನ ಗೌರವಾನ್ವಿತ ಪ್ರಾಧ್ಯಾಪಕರಾದ ರಾಘವೇಂದ್ರ ಗದಗಕರ್‌ ಅವರಿಗೆ ಸಂಪಾದಕರು ಧನ್ಯವಾದಗಳನ್ನು ಅರ್ಪಿಸುತ್ತಾರೆ. ಲೇಖಕರೊಂದಿಗೆ ಪ್ರಾರಂಭಿಕ ಮಾತುಕತೆಗಳಿಗೆ ಸಹಾಯ ಮಾಡಿದ ಅಜೀ಼ಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿಜೆತಾ ರಘುರಾಂರವರಿಗೂ ಧನ್ಯವಾದಗಳು.

ಟಿಪ್ಪಣಿಗಳು

  • ಲೇಖನದ ಶೀರ್ಷಿಕೆಯ ಹಿನ್ನೆಲೆಯಲ್ಲಿ ಬಳಸಿರುವ ಚಿತ್ರ ಕೃಪೆ: ಧ್ಯಾನನಿರತ ಕಬ್ಬಾರೆ, ಹೇಮಲ್ ನಾಯಕ್. ಪರವಾನಗಿ: ಕೃತಿಸ್ವಾಮ್ಯ: ಹೇಮಲ್ ನಾಯಕ್. ಅವರ ಅನುಮತಿಯೊಂದಿಗೆ ಇಲ್ಲಿ ಬಳಸಲಾಗಿದೆ.
  • ಈ ಕಥೆಯನ್ನು ಮೊದಲು ʼಮೀಡಿಯಂʼನಲ್ಲಿ ಪ್ರಕಟಿಸಲಾಯಿತು: https://hemalnaik.medium.com/the-meditating-heron-white-bellied-heron-an-emissary-from-the-past-6100aa1cb2a7 ಐ ವಂಡರ್‌ನಲ್ಲಿ ಪ್ರಕಟಿಸಿರುವ ಆವೃತ್ತಿಯಲ್ಲಿ ಬಳಸಿರುವ ಪದಗಳನ್ನು ಮಾಧ್ಯಮಿಕ ಶಾಲಾ ವಿಜ್ಞಾನದ ಹಾಗೂ ಪ್ರಾಥಮಿಕ ಶಾಲಾ ಪರಿಸರ ವಿಜ್ಞಾನದ ಬೋಧಕರಾಗಿರುವ ನಮ್ಮ ಓದುಗರಿಗೆ ಸರಿಹೊಂದುವಂತೆ ಮಾರ್ಪಡು ಮಾಡಲಾಗಿದೆ. ಲೇಖಕರ ಅನುಮತಿಯೊಂದಿಗೆ ಈ ಮಾರ್ಪಾಡುಗಳನ್ನು ಮಾಡಲಾಗಿದೆ.
  • ಹೇಮಲ್ ನಾಯಕ್ ಅವರ ಬರೆಹಗಳನ್ನು ಇನ್ನಷ್ಟು ಓದಲು, https://hemalnaik.medium.com/ ಗೆ ಭೇಟಿ ನೀಡಿ.
  • ಈ ಲೇಖನದಲ್ಲಿ ಪ್ರತ್ಯೇಕಿಸಿ ಬಳಸಬಹುದಾದ ಐದು ತರಗತಿ ಸಂಪನ್ಮೂಲಗಳಿವೆ: ಚಟುವಟಿಕೆ ಹಾಳೆ I: ಮೀನು ಹಿಡಿಯುವ ಪಕ್ಷಿಗಳನ್ನು ಗಮನಿಸಿ, ಚಟುವಟಿಕೆ ಹಾಳೆ II: ನೆರೆಹೊರೆಯ ಪಕ್ಷಿಗಳಲ್ಲಿನ ಬದಲಾವಣೆಯ ದಾಖಲೆ, ಚಟುವಟಿಕೆ ಹಾಳೆ III: ಹಕ್ಕಿ-ಬಾನಿಗೆ ಪಕ್ಷಿಗಳಿಗೆ ಆಹ್ವಾನ, ಶಿಕ್ಷಕರ ಮಾರ್ಗದರ್ಶಿ: ಚಟುವಟಿಕೆ ಹಾಳೆಗಳು I & II, ಮತ್ತು ಶಿಕ್ಷಕರ ಮರ್ಗದರ್ಶಿ: ಚಟುವಟಿಕೆ ಹಾಳೆ III.

ಪರಾಮರ್ಶನ

  1. National Steering Committee for National Curriculum Frameworks. ‘National Curriculum Framework for School Education 2023’. National Council of Educational Research and Training. URL: https://ncert.nic.in/pdf/NCFSE-2023-August_2023.pdf.
  2. Dawa Gyelmo. ‘World’s rarest heron on the brink in its last Himalayan stronghold’. Dialogue Earth (2021). URL: https://dialogue.earth/en/nature/white-bellied- heron-threatened-in-bhutan/.
  3. The IUCN-SCC Heron Specialist Group. ‘White-bellied Heron’. Heron Conservation. URL: https://www.heronconservation.org/herons-of-the-world/list-of- herons/white-bellied-heron/.