ಆಗಸ್ಟ್‌ 2025 ಸಂಚಿಕೆ

aug-2025-issue

ನಮ್ಮ ಆಗಸ್ಟ್ 2025 ರ ಸಂಚಿಕೆಗೆ ನಿಮಗೆ ಸ್ವಾಗತ. ಈ ಸಂಚಿಕೆಯ ಮುಖ್ಯ ವಿಷಯ ನಮ್ಮ ಸುತ್ತಮುತ್ತಲಿನ ವಸ್ತುಗಳು. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳು ಅಥವಾ ಬಳಸಬಹುದಾದ ಪಠ್ಯ ಸಂಪನ್ಮೂಲಗಳು ನಿಮ್ಮ ತರಗತಿಯ ಬೋಧನೆಗೆ ಹೇಗೆ ಸಹಕಾರಿಯಾದವು ಎಂಬುದನ್ನು ನಮಗೆ ತಿಳಿಸಿ. ಇತರ ಶಿಕ್ಷಕರಿಗೆ ಉಪಯುಕ್ತವಾಗಬಲ್ಲ ನಿಮ್ಮ ಅಂತಹ ಅನುಭವಗಳನ್ನು ನಾವು ನಮ್ಮ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ.

ಈ ಸಂಚಿಕೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಅಥವಾ ನಮಗೆ ಈಮೇಲ್‌ ಮಾಡಿ: iwonder@apu.edu.in

ಸಂಪಾದಕರ ನುಡಿ...

ಆರನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದಲ್ಲಿ (ಎನ್.ಸಿ.ಇ.ಆರ್.ಟಿ., ಮರುಮುದ್ರಣ 2025-2026)ದಲ್ಲಿ ಮಕ್ಕಳಿಗೆ ‘ನಮ್ಮ ಸುತ್ತಲಿನ ವಸ್ತುಗಳು’ ಎಂಬ ವಿಷಯವನ್ನು ಔಪಚಾರಿಕವಾಗಿ ಪರಿಚಯಿಸಲಾಗುತ್ತದೆ. ʼಗಾಳಿʼ ನಮ್ಮ ಸುತ್ತಲಿರುವ ವಸ್ತುಗಳಲ್ಲಿ ʼಗಾಳಿʼಯೂ ಒಂದು ಎಂಬುದು ಆ ಕ್ಷಣದಲ್ಲಿ ಮಕ್ಕಳ ಮನಸ್ಸಿಗೆ ಬರದಿರಬಹುದು. ಭೂಮಿಯ ವಾತಾವರಣ ಎಂಬ ‘ಗಾಳಿಯ ಸಾಗರ’ದ ತಳದಲ್ಲಿ ನಾವು ಜೀವಿಸುತ್ತೇವೆ. ಈ ಗಾಳಿಯ ಬಗ್ಗೆ ಮಕ್ಕಳಿಗೆ ಸಹಜವಾಗಿಯೇ ಕುತೂಹಲವಿರುತ್ತದೆ. ಅದರ ಬಗ್ಗೆ ಅವರು ತಮ್ಮದೇ ಆದ ಕುತೂಹಲಕಾರಿ ಆಲೋಚನೆಗಳನ್ನು ಹೊಂದಿರುತ್ತಾರೆ. ಆದರೆ ಈ ಕುತೂಹಲ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ.

ಸಾವಿರಾರು ವರ್ಷಗಳಿಂದ ಮನುಷ್ಯರು ತಮ್ಮ ದೈನಂದಿನ ಅನುಭವಗಳ ಆಧಾರದ ಮೇಲೆ ಗಾಳಿಯ ಸ್ವರೂಪದ ಬಗ್ಗೆ ಯೋಚಿಸುತ್ತಲೇ ಬಂದಿದ್ದಾರೆ. ಪ್ರಾಚೀನ ಕಾಲದ ಹೆಚ್ಚಿನ ಸಂಸ್ಕೃತಿಗಳು ಗಾಳಿಯನ್ನು ಈ ಪ್ರಪಂಚವನ್ನು ರೂಪಿಸುವ ಮೂಲಧಾತುಗಳಲ್ಲಿ ಒಂದು ಎಂದು ಪರಿಗಣಿಸಿದ್ದವು. ಸುಮಾರು 2500 ವರ್ಷಗಳ ಹಿಂದೆ, ಗ್ರೀಕ್ ತತ್ವಜ್ಞಾನಿ ಎಂಪೆಡೋಕ್ಲಿಸ್, ಗಾಳಿಯು ಕೇವಲ ಖಾಲಿ ಜಾಗ ಅಥವಾ ಶೂನ್ಯವಲ್ಲ ಎಂದು ತೋರಿಸಿಕೊಟ್ಟರು. ಅವರು ತಳದಲ್ಲಿ ಸಣ್ಣ ರಂಧ್ರವಿರುವ ಒಂದು ಬಟ್ಟಲನ್ನು ತೆಗೆದುಕೊಂಡು (ರಂಧ್ರವನ್ನು ಬೆರಳಿನಿಂದ ಮುಚ್ಚಿ), ಅದನ್ನು ನೀರಿನ ಪಾತ್ರೆಯಲ್ಲಿ ಬೋರಲು ಇಟ್ಟರು. ಆಗ ಬಟ್ಟಲಿನ ಒಳಗಿದ್ದ ಗಾಳಿಯು ನೀರು ಒಳಗೆ ಬರದಂತೆ ತಡೆಯುವುದನ್ನು ಗಮನಿಸಿದರು. ಇದರಿಂದ ಗಾಳಿಯು ನೀರನ್ನು ಹಿಂದಕ್ಕೆ ತಳ್ಳಬಲ್ಲ ಒಂದು ವಸ್ತು ಎಂದು ತೀರ್ಮಾನಿಸಿದರು. ಮಕ್ಕಳು ಈ ಪ್ರಯೋಗವನ್ನು ಮಾಡುವಾಗ ರಂಧ್ರದ ಮೇಲಿದ್ದ ಬೆರಳನ್ನು ತೆಗೆದರೆ, ಗಾಳಿಯು ಹೊರಬರುವುದನ್ನು ಗಮನಿಸಬಹುದು. ಮತ್ತೊಂದು ಪ್ರಮುಖ ಸಂಶೋಧನೆ ನಡೆದದ್ದು ಸುಮಾರು 400 ವರ್ಷಗಳ ಹಿಂದೆ. ಇಟಲಿಯ ವಿಜ್ಞಾನಿ ಗ್ಯಾಸ್ಪಾರೋ ಬೆರ್ಟಿ, ನಮ್ಮ ಸುತ್ತಲಿನ ಗಾಳಿಗೆ ತೂಕವಿದೆ ಎಂದು ತೋರಿಸಿಕೊಟ್ಟರು. ಇದನ್ನೇ ನಾವು ‘ವಾಯುಮಂಡಲದ ಒತ್ತಡ’ ಎಂದು ಕರೆಯುತ್ತೇವೆ. ಸುಮಾರು 250 ವರ್ಷಗಳ ಹಿಂದೆ, ಫ್ರೆಂಚ್ ರಸಾಯನ ವಿಜ್ಞಾನಿ ಅಂತ್ವಾನ್ ಲಾವೋಯಿಸಿಯರ್, ಗಾಳಿಯಲ್ಲಿರುವ ‘ಆಮ್ಲಜನಕ’ ಎಂಬ ಅಂಶವು ವಸ್ತುಗಳ ಉರಿಯುವಿಕೆ ಅಥವಾ ದಹನ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಪ್ರಯೋಗಗಳ ಮೂಲಕ ಪತ್ತೆಹಚ್ಚಿದರು. ಮುಚ್ಚಿದ ಪಾತ್ರೆಗಳಲ್ಲಿ ಪ್ರಯೋಗ ಮಾಡಿದಾಗ, ಉರಿಯುವ ಮೊದಲು ಮತ್ತು ಉರಿದ ನಂತರ ವಸ್ತುಗಳ ಒಟ್ಟು ದ್ರವ್ಯರಾಶಿಯು ಬದಲಾಗುವುದಿಲ್ಲ ಎಂದು ಅವರು ಕಂಡುಕೊಂಡರು. ಈ ‘ದ್ರವ್ಯರಾಶಿ ಸಂರಕ್ಷಣಾ ನಿಯಮ’ವು ರಸಾಯನ ವಿಜ್ಞಾನದ ಮುಂದಿನ ಬೆಳವಣಿಗೆಗೆ ದಾರಿಯಾಯಿತು.

ಆದರೆ, ಗಾಳಿಯು ಒಂದು ವಸ್ತು ಅಥವಾ ಅದಕ್ಕೆ ದ್ರವ್ಯರಾಶಿಯಿದೆ ಎಂಬುದನ್ನು ಒಪ್ಪಿಕೊಳ್ಳುವುದು ಇಂದಿಗೂ ಮಕ್ಕಳಿಗೆ ಮತ್ತು ದೊಡ್ಡವರಿಗೂ ಕಷ್ಟವೆನಿಸುತ್ತದೆ. ಗಾಳಿಯ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಾವಿರಾರು ವರ್ಷಗಳೇ ಬೇಕಾಗಿರುವುದರಿಂದ ಇದರಲ್ಲಿ ಆಶ್ಚರ್ಯವೇನಿಲ್ಲ. ಹಾಗಾದರೆ, ಗಾಳಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಉತ್ತಮ ತಿಳುವಳಿಕೆಯನ್ನು ಮೂಡಿಸುವುದು ಹೇಗೆ? ಅವರು ವೈಜ್ಞಾನಿಕವಾಗಿ ಸರಿಯಾದ ತೀರ್ಮಾನಕ್ಕೆ ಬರಲು ನಾವು ಹೇಗೆ ಸಹಾಯ ಮಾಡಬಹುದು? ಈ ಪ್ರಶ್ನೆಗಳೇ ಈ ಬಾರಿಯ ‘ಐ ವಂಡರ್…’ ಸಂಚಿಕೆಯ ಎರಡು ಲೇಖನಗಳ ಮುಖ್ಯ ಉದ್ದೇಶವಾಗಿವೆ. ‘ಖಾಲಿ ಲೋಟದಲ್ಲಿ ಗಾಳಿ ಇದೆಯೇ?’ ಎಂಬ ಲೇಖನದಲ್ಲಿ ವಿಪಿನ್ ಕುಮಾರ್ ಅವರು ಗಾಳಿಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪ್ರಯೋಗಗಳ ಮೂಲಕ ಮಕ್ಕಳ ಆಲೋಚನೆಗಳನ್ನು ಹೇಗೆ ಹಂತ ಹಂತವಾಗಿ ಸುಧಾರಿಸಬಹುದು ಎಂಬುದನ್ನು ಅವರು ಇಲ್ಲಿ ತೋರಿಸಿದ್ದಾರೆ. ‘ಗಾಳಿ ತುಂಬಿದ ಬಲೂನ್‌ ಹೆಚ್ಚು ಭಾರವಿರುತ್ತದೆಯೇ?’ ಎಂಬ ಇನ್ನೊಂದು ಲೇಖನದಲ್ಲಿ ಸೌರವ್ ಶೋಮ್ ಮತ್ತು ವಿಜೇತಾ ರಘುರಾಮ್ ಅವರು ದೈನಂದಿನ ವಸ್ತುಗಳನ್ನು ಬಳಸಿ ಮಾಡುವ ಒಂದು ಸರಳ ಪ್ರಯೋಗವನ್ನು ವಿವರಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್‌ನ ಸಂಸ್ಥಾಪಕ ನಿರ್ದೇಶಕರಾದ ಒಬೈದ್ ಸಿದ್ದಿಕಿ ಅವರು ಒಮ್ಮೆ ಹೀಗೆ ಹೇಳಿದ್ದರು: “ಪ್ರೌಢಿಮೆ ಅಥವಾ ಸೂಕ್ಷ್ಮತೆಯು ನಮ್ಮ ಆಲೋಚನೆಯಲ್ಲಿರಬೇಕೇ ಹೊರತು, ದುಬಾರಿ ಉಪಕರಣಗಳಲ್ಲಿ ಅಥವಾ ಪ್ರಯೋಗಾಲಯಗಳಲ್ಲಿ ಅಲ್ಲ.” ಈ ಲೇಖನಗಳಲ್ಲಿರುವ ವಿಚಾರಗಳನ್ನು ವಿವಿಧ ತರಗತಿಗಳಲ್ಲಿ ಗಾಳಿಗೆ ಸಂಬಂಧಿಸಿದ ಬೇರೆ ಬೇರೆ ಪಾಠಗಳನ್ನು ಬೋಧಿಸಲು ಬಳಸಿಕೊಳ್ಳಬಹುದು.

ಈ ಲೇಖನಗಳು ಮತ್ತು ಪಠ್ಯ-ಸಂಪನ್ಮೂಲಗಳು ನಿಮ್ಮ ತರಗತಿಯ ಬೋಧನೆಯಲ್ಲಿ ಉಪಯುಕ್ತವಾಗುತ್ತವೆ ಎಂದು ನಾವು ಭಾವಿಸುತ್ತೇವೆ. ಈ ಬೋಧನಾ ವಿಧಾನಗಳನ್ನು ನೀವು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳುತ್ತೀರಿ ಎಂಬ ಭರವಸೆ ನಮಗಿದೆ. ಎಂದಿನಂತೆ, ನಿಮ್ಮ ಬೋಧನಾ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ನಾವು ಎದುರುನೋಡುತ್ತಿದ್ದೇವೆ!

ಅನೀಶ್ ಮೊಕಾಶಿ
ಸಂಪಾದಕ ಮಂಡಳಿಯ ಸದಸ್ಯರು