ಕಪಿಲಾ ಬೈದೇವ್: ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಕಿವಿಗೊಟ್ಟು ಕೇಳುವುದು

ಅನುವಾದ: ಎಚ್‌. ಜಿ. ಜಯಲಕ್ಷ್ಮಿ | ಪರಿಶೀಲನೆ: ಬಿ. ಆರ್‌. ಮಂಜುನಾಥ್‌

ಒಂದು ಕಾಲ್ಪನಿಕ ಪಾತ್ರದಿಂದ ಯೋಚನೆಗೆ ಹಚ್ಚುವಂತಹ ಉತ್ತರಗಳನ್ನು ಪಡೆಯುವುದು, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸಬಹುದೇ?

ಸೆಪ್ಟೆಂಬರ್ 14, 2022ರಂದು, ನಾನು ಐ ವಂಡರ್… ನಡೆಸಿದ ‘ವಿಜ್ಞಾನದಲ್ಲಿ ಪ್ರಶ್ನೆಗಳನ್ನು ಕೇಳುವುದು’1 ವೆಬಿನಾರ್ ಅನ್ನು ವೀಕ್ಷಿಸಿದೆ. ಈ ಕಾರ್ಯಕ್ರಮದಲ್ಲಿ ಭೋಪಾಲ್‌ನ ಏಕಲವ್ಯ ಸಂಸ್ಥೆಯ ಮಾಧವ್ ಕೇಳ್ಕರ್ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸೌರವ್ ಶೋಮ್ ಅವರ ನಡುವಿನ ಸಂಭಾಷಣೆ ಇತ್ತು. ಮಕ್ಕಳು ತಮ್ಮ ಕುತೂಹಲ ಕೆರಳಿಸುವ ಯಾವುದೇ ವಿಜ್ಞಾನದ ಪ್ರಶ್ನೆಗಳನ್ನು ಕೇಳುವಂತೆ ಉತ್ತೇಜಿಸಲು ‘ಸವಾಲಿರಾಮ್’ ಎಂಬ ಕಾಲ್ಪನಿಕ ಪಾತ್ರವನ್ನು ಏಕಲವ್ಯ ತಂಡವು ಹೇಗೆ ಸೃಷ್ಟಿಸಿತು ಎಂದು ಮಾಧವ್ ಅವರು ವಿವರಿಸಿದರು. ಇದು ಫಲಪ್ರದವಾಯಿತು. ಹಲವಾರು ಶಾಲೆಗಳ ಮಕ್ಕಳು ಪೋಸ್ಟ್‌ಕಾರ್ಡ್‌ಗಳ ಮೂಲಕ ಸವಾಲಿರಾಮ್ ವಿಳಾಸಕ್ಕೆ ತಮ್ಮ ಪ್ರಶ್ನೆಗಳನ್ನು ಕಳುಹಿಸಿದರು. ಏಕಲವ್ಯ ತಂಡವು ಸವಾಲಿರಾಮ್ ಹೆಸರಿನಲ್ಲೇ ಕೈಬರಹದ ಪತ್ರಗಳ ಮೂಲಕ ಉತ್ತರಗಳನ್ನು ಮರಳಿ ಕಳುಹಿಸುತ್ತಿತ್ತು. ಮಕ್ಕಳ ಕುತೂಹಲ ಮತ್ತು ಕೈಬರಹದ ಸಂವಹನದ ಆಪ್ತತೆಯ ಮೌಲ್ಯವನ್ನು ಪ್ರತಿಬಿಂಬಿಸುವ ಈ ಆಲೋಚನೆ ಬಹಳ ಸುಂದರವಾಗಿತ್ತು.2 ಇದರಿಂದ ಸ್ಫೂರ್ತಿ ಬಂದು ನನಗೆ “ನಮ್ಮ ಶಾಲೆಯಲ್ಲೂ ಇಂತಹದ್ದನ್ನು ಏಕೆ ಪ್ರಯತ್ನಿಸಬಾರದು?” ಎಂಬ ಆಲೋಚನೆ ಬಂತು.

ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸುವುದು

ಅಸ್ಸಾಂನ ಮಾಜುಲಿ ಜಿಲ್ಲೆಯಲ್ಲಿರುವ ಹಮ್ಮಿಂಗ್‌ಬರ್ಡ್ ಶಾಲೆಯು ಮುಖ್ಯವಾಗಿ ಅಲ್ಲಿನ ದ್ವೀಪದಲ್ಲಿರುವ ಮಿಶಿಂಗ್ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಮೊದಲಿನಿಂದಲೂ ಪ್ರಶ್ನೆ ಕೇಳುವ ಮತ್ತು ಹೊಸ ವಿಚಾರಗಳನ್ನು ಅನ್ವೇಷಿಸುವ ಸಂಸ್ಕೃತಿಯನ್ನು ಬೆಳೆಸಲು ನಾವು ಪ್ರಯತ್ನಿಸುತ್ತಾ ಬಂದಿದ್ದೇವೆ. ‘ಸವಾಲಿರಾಮ್’ ಪಾತ್ರದಿಂದ ಪ್ರೇರಿತರಾಗಿ, 2023ರಲ್ಲಿ ನಾವು ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸುವ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಿದೆವು. ಮಕ್ಕಳಿಗೆ ‘ಕಪಿಲಾ ಬೈದೇವ್’ ಎಂಬ ಕಾಲ್ಪನಿಕ ಪಾತ್ರವನ್ನು ಪರಿಚಯಿಸಲಾಯಿತು. ಈ ಹೆಸರನ್ನು ಬಹಳ ಯೋಚಿಸಿ ಆಯ್ಕೆ ಮಾಡಲಾಗಿತ್ತು. ಮಿಶಿಂಗ್ ಭಾಷೆಯಲ್ಲಿ ‘ಕಪಿಲಾ’ ಎಂದರೆ ‘ಏಕೆ’ ಎಂದು ಅರ್ಥ, ಮತ್ತು ಅಸ್ಸಾಮಿ ಭಾಷೆಯಲ್ಲಿ ‘ಬೈದೇವ್’ ಎಂದರೆ ‘ಅಕ್ಕ’ ಎಂದರ್ಥ. ಒಟ್ಟಾಗಿ ಸೇರಿಸಿದರೆ ‘ಕಪಿಲಾ ಬೈದೇವ್’ ಎಂದರೆ ಸ್ಥೂಲವಾಗಿ ‘ಏಕೆ ಅಕ್ಕ’ ಎಂಬ ಅರ್ಥ ಬರುತ್ತದೆ. ಮಕ್ಕಳು ಅವಳನ್ನು, ತಮ್ಮ ಪ್ರಶ್ನೆಗಳನ್ನು ಕೇಳಿಸಿಕೊಂಡು, ಅದಕ್ಕೆ ಆಳವಾಗಿ ಯೋಚಿಸಿ ಪ್ರತಿಕ್ರಿಯೆ ನೀಡುವ ಒಬ್ಬ ಕಾಳಜಿ ಮತ್ತು ಕುತೂಹಲವುಳ್ಳ ಹಿರಿಯಕ್ಕನಂತೆ ನೋಡಲಿ ಎಂಬುದು ನಮ್ಮ ಆಶಯವಾಗಿತ್ತು. ಕಪಿಲಾ ಬೈದೇವ್‍ಳ ಬದುಕಿನ ಬಗ್ಗೆ ಮಕ್ಕಳಿಗೆ ಕುತೂಹಲ ಇರುತ್ತದೆ ಎಂದು ತಿಳಿದು, ನಾವು ಅವಳಿಗೊಂದು ಹಿನ್ನೆಲೆ ಕಥೆಯನ್ನು ಸಿದ್ಧಪಡಿಸಿದೆವು. ಅವಳು ‘ರ್ಯಾಷನಾಲಿಯಾ’ ಎಂಬ ಕಾಲ್ಪನಿಕ ದೇಶದವಳೆಂದೂ, ಅಲ್ಲಿನ ‘ಶಾಂತಿ ವಿಶ್ವವಿದ್ಯಾಲಯ’ದ ಮಾನವಿಕ ವಿಭಾಗದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ; ಸ್ವಾಭಾವಿಕವಾಗಿ ಬಹುಮುಖ ಪ್ರತಿಭೆಯುಳ್ಳವಳಾದ ಅವಳು ವಿಜ್ಞಾನವಾಗಲಿ, ಸಮಾಜವಾಗಲಿ ಅಥವಾ ಭಾವನೆಯಾಗಲಿ – ಎಲ್ಲ ವಿಷಯಗಳ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದಾಳೆ ಎಂದು ಮಕ್ಕಳಿಗೆ ತಿಳಿಸಿದೆವು. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಸ್ವೀಕರಿಸಲು ನಾವು ಸಾಂಪ್ರದಾಯಿಕ ಅಂಚೆ ಪೆಟ್ಟಿಗೆಯಂತಿರುವ ವಿಶೇಷವಾದ ‘ಕಪಿಲಾ ಬೈದೇವ್ ಪೆಟ್ಟಿಗೆ’ಯನ್ನು ಸಿದ್ಧಪಡಿಸಿದೆವು (ಚಿತ್ರ 1 ನೋಡಿ).

ಚಿತ್ರ 1. ಕಪಿಲಾ ಬೈದೇವ್ ಪೆಟ್ಟಿಗೆ. ಒಂದು ಸಾಮಾನ್ಯ ಅಂಚೆ ಪೆಟ್ಟಿಗೆಯಂತೆ ವಿನ್ಯಾಸಗೊಳಿಸಲಾದ ಈ ಪೆಟ್ಟಿಗೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಹಾಕುತ್ತಾರೆ. ಕೃಪೆ: ದೀಪಕ್ ರಜಪೂತ್. ಪರವಾನಗಿ: CC BY-NC-ND 4.0.

ಆರಂಭದಿಂದಲೂ ಈ ಪ್ರಯತ್ನವು ಯಶಸ್ವಿಯಾಗಿದೆ. ನಮ್ಮ ವಿದ್ಯಾರ್ಥಿಗಳು ಉತ್ಸಾಹದಿಂದ ಪೆಟ್ಟಿಗೆಯಲ್ಲಿ ಪ್ರಶ್ನೆಗಳನ್ನು ಹಾಕುತ್ತಾರೆ. ಅವರ ಪ್ರಶ್ನೆಗಳ ಸಂಖ್ಯೆ ಮತ್ತು ಅವುಗಳ ಆಳವನ್ನು ಕಂಡು ನಾವು ಬಹಳ ಸಂತೋಷ ಪಡುತ್ತೇವೆ. ನನ್ನನ್ನೂ ಒಳಗೊಂಡಂತೆ 4-5 ಶಿಕ್ಷಕರ ತಂಡವೊಂದು ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಶ್ರಮಿಸುತ್ತದೆ. ಪ್ರಶ್ನೆ ಬಂದ 15 ದಿನಗಳೊಳಗೆ ಉತ್ತರ ನೀಡಲು ಪ್ರಯತ್ನಿಸುತ್ತೇವೆ; ಏಕೆಂದರೆ ತಡವಾದರೆ ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಾರೆ. ಈ ಉತ್ತರ ನೀಡುವ ಪ್ರಕ್ರಿಯೆಯು ಒಂದು ಆಳವಾದ ಸಾಮೂಹಿಕ ಕೆಲಸವಾಗಿದೆ. ನಮಗೆ ಬರುವ ಪ್ರತಿಯೊಂದು ಪ್ರಶ್ನೆಯನ್ನು ತಂಡದ ಎಲ್ಲ ಶಿಕ್ಷಕರಿಗೂ ಕಾಣುವಂತೆ ಒಂದು ಸ್ಪ್ರೆಡ್‌ಶೀಟ್‌ನಲ್ಲಿ ದಾಖಲಿಸುತ್ತೇವೆ. ಶಿಕ್ಷಕರು ತಮಗೆ ಇಷ್ಟವಾದ ಪ್ರಶ್ನೆಗಳನ್ನು ಆಯ್ದುಕೊಂಡು ಉತ್ತರ ಸಿದ್ಧಪಡಿಸುತ್ತಾರೆ. ನಾವು ಪರಸ್ಪರರ ಉತ್ತರಗಳನ್ನು ಓದಿ ಸಲಹೆಗಳನ್ನು ಸಹ ನೀಡುತ್ತೇವೆ. ಸರಿಯಾಗಿ ಆಲೋಚಿಸಿ ಉತ್ತರ ನೀಡಲು ನಾವು ಒಂದು ತಂಡವಾಗಿ ಬಹಳ ಸಲ ಚರ್ಚೆ ಮಾಡಿ, ಅಂತರ್ಜಾಲದಲ್ಲಿ ಮಾಹಿತಿ ಹುಡುಕುತ್ತೇವೆ.

ಅಗತ್ಯವಿದ್ದಾಗ ತಂಡದ ಸದಸ್ಯರು ಬೇರೆಯವರ ಸಲಹೆಯನ್ನು ಪಡೆಯುವುದೂ ಉಂಟು. ಉದಾಹರಣೆಗೆ, ಪ್ರವಾಹದ ಬಗ್ಗೆ ಅಥವಾ ನೈಸರ್ಗಿಕ ವಿಕೋಪಗಳ ಪ್ರಶ್ನೆ ಬಂದರೆ ಅಂಥ ಅನುಭವಗಳ ಪರಿಚಯವಿರುವ ಸ್ಥಳೀಯ ಶಿಕ್ಷಕರನ್ನು ವಿಚಾರಿಸುತ್ತೇವೆ. ನಾವು ಎಲ್ಲವನ್ನೂ ಬಲ್ಲ ತಜ್ಞರು ಎಂದು ಹೇಳಿಕೊಳ್ಳದಿದ್ದರೂ, ಕಪಿಲಾ ಬೈದೇವ್ ನೀಡುವ ಉತ್ತರವು ಕಾಳಜಿಯಿಂದ ಕೂಡಿರಲಿ ಮತ್ತು ನಂಬಿಕೆಗೆ ಅರ್ಹವಾಗಿರಲಿ ಎಂದು ಬಯಸುತ್ತೇವೆ. “ಎಲೆಗಳು ಏಕೆ ಹಸಿರಾಗಿರುತ್ತವೆ?” ಎಂಬಂತಹ ವೈಜ್ಞಾನಿಕ ಪ್ರಶ್ನೆಗೆ ಉತ್ತರಿಸುವಾಗ ಕಪಿಲಾ ಕೇವಲ ಪಠ್ಯಪುಸ್ತಕದ ವ್ಯಾಖ್ಯಾನ ನೀಡುವುದಿಲ್ಲ, ಬದಲಾಗಿ ಮಕ್ಕಳನ್ನು ಸಂಭಾಷಣೆಗೆ ಆಹ್ವಾನಿಸುತ್ತಾಳೆ. ಇಂಥ ಉತ್ತರಗಳು ಅನೇಕ ಸಾರಿ ಹಲವು ಪ್ರಶ್ನೆ-ಉತ್ತರಗಳ ಪತ್ರಗಳ ಸರಣಿ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಮಕ್ಕಳು ಹೆಚ್ಚು ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಉದಾಹರಣೆಗೆ, ಚರ್ಚೆಯು ಸಸ್ಯಗಳು ಏಕೆ ಹಸಿರಾಗಿರುತ್ತವೆ, ಆ ಬಣ್ಣವು ಏಕೆ ಮುಖ್ಯ ಮತ್ತು ಸಸ್ಯಗಳು ಹೇಗೆ ಬದುಕುತ್ತವೆ ಮತ್ತು ಬೆಳೆಯುತ್ತವೆ ಎಂಬ ವಿಷಯಗಳತ್ತ ಸಾಗಬಹುದು (ಚಿತ್ರ 2 ನೋಡಿ). ಇಂತಹ ಚಿಂತನಶೀಲ ಸಂವಾದಗಳ ಮೂಲಕ, ಕಪಿಲಾ ಬೈದೇವ್ ಪ್ರತಿಯೊಬ್ಬ ವಿದ್ಯಾರ್ಥಿಯ ಕುತೂಹಲ ಮತ್ತು ತಿಳುವಳಿಕೆಗೆ ತಕ್ಕಂತೆ ಪ್ರತಿಕ್ರಿಯೆಯನ್ನು ಬದಲಾಯಿಸುತ್ತಾ, ಒಬ್ಬ ವೈಯಕ್ತಿಕ ಮಾರ್ಗದರ್ಶಿಯಾಗಿ ಬದಲಾಗುತ್ತಾಳೆ. ಇದರಿಂದಾಗಿ ವಿಚಾರಣೆಯ ಪ್ರಕ್ರಿಯೆಯು ಕೇವಲ ಮಾಹಿತಿಯನ್ನು ಹಂಚಿಕೊಳ್ಳುವುದಷ್ಟೇ ಆಗಿರದೆ, ಸಂಬಂಧಗಳನ್ನು ಬೆಸೆಯುವಂತಿರಲು ಸಹಾಯ ಮಾಡುವಂತಾಗುತ್ತದೆ.

Kapila Baideu fig 2
ಚಿತ್ರ 2. ಕಪಿಲಾ ಬೈದೇವ್ ನೀಡಿದ ಉತ್ತರದ ಒಂದು ಉದಾಹರಣೆ. ಪ್ರಶ್ನೆಗೆ ನೇರವಾಗಿ ಉತ್ತರಿಸುವ ಬದಲು, ಆ ಪ್ರಶ್ನೆಗೆ ಕಾರಣವಾದ ನೈಸರ್ಗಿಕ ವಿದ್ಯಮಾನದ ಬಗ್ಗೆ ವಿದ್ಯಾರ್ಥಿಗಳು ಆಳವಾಗಿ ಯೋಚಿಸುವಂತೆ ಕಪಿಲಾ ಪ್ರೇರೇಪಿಸುತ್ತಾಳೆ. ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ವಿದ್ಯಾರ್ಥಿಯ ಹೆಸರನ್ನು ಇಲ್ಲಿ ಅಳಿಸಿಹಾಕಲಾಗಿದೆ. ಕೃಪೆ: ದೀಪಕ್ ರಜಪೂತ್. ಪರವಾನಗಿ: CC BY-NC-ND 4.0.

ಮೊದಮೊದಲು ನಾವು ಕಪಿಲಾ ಬೈದೇವ್ ಕೇವಲ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳ ಸುತ್ತ ಕುತೂಹಲ ಹುಟ್ಟಿಸಲು ಮಾತ್ರ ಸೀಮಿತವಾಗಿರುತ್ತಾಳೆ ಎಂದುಕೊಂಡಿದ್ದೆವು. ಖಂಡಿತವಾಗಿಯೂ, ಅನೇಕ ವಿದ್ಯಾರ್ಥಿಗಳು “ಎಲೆಗಳು ಏಕೆ ಹಸಿರಾಗಿರುತ್ತವೆ?” ಅಥವಾ “ನಕ್ಷತ್ರಗಳು ಹೇಗೆ ಹೊಳೆಯುತ್ತವೆ?” ಎಂದು ಕೇಳುತ್ತಾರೆ. ಆದರೆ ನಮಗೆ ಆಶ್ಚರ್ಯ (ಮತ್ತು ಸಂತೋಷ) ಆಗುವಂತೆ, ಈ ಪ್ರಶ್ನೆಗಳು ಶೀಘ್ರದಲ್ಲೇ ವೈವಿಧ್ಯಮಯವಾಗಿ ಬದಲಾಗಿವೆ. ಕೆಲವು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಕಾಳಜಿಗಳನ್ನು ಹಂಚಿಕೊಳ್ಳುತ್ತಾರೆ: “ನನಗೆ ಯಾಕೆ ಸ್ನೇಹಿತರಿಲ್ಲ?” ಅಥವಾ “ನನ್ನ ಕೂದಲು ಏಕೆ ಗಿಡ್ಡವಾಗಿದೆ?”. ಇನ್ನು ಕೆಲವರು “ನಮ್ಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಏಕೆ ಇರಬೇಕು?” ಮುಂತಾದ ಸಾಮಾಜಿಕ ಅಥವಾ ತಾತ್ತ್ವಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪತ್ರಗಳು ಈಗ ಕೇವಲ ಸರಳ ಪ್ರಶ್ನೆಗಳ ಅಭಿವ್ಯಕ್ತಿಯಾಗಿ ಉಳಿದಿಲ್ಲ—ಅವು ನಮ್ಮ ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಬೌದ್ಧಿಕ ಪ್ರಪಂಚದ ಕಿಟಕಿಗಳಾಗಿ ಮಾರ್ಪಟ್ಟಿವೆ. ನಮ್ಮ ತಂಡದ ಸದಸ್ಯರಲ್ಲೊಬ್ಬರು ಶಾಲಾ ಆಪ್ತಸಮಾಲೋಚಕರು. ಅವರು ನಿರ್ದಿಷ್ಟವಾಗಿ, ಭಯ, ದುಃಖ ಅಥವಾ ಕೀಳರಿಮೆಗೆ ಸಂಬಂಧಿಸಿದ, ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಪತ್ರಗಳಿಗೆ ಪ್ರತಿಕ್ರಿಯಿಸುತ್ತಾರೆ. ವಿದ್ಯಾರ್ಥಿಗಳು ಕೆಲವೊಮ್ಮೆ “ನಾನು ಗಣಿತದಲ್ಲಿ ಏಕೆ ಪ್ರವೀಣನಲ್ಲ?” ಅಥವಾ “ನಾನು ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಮತ್ತು ನನಗೆ ನಾಚಿಕೆಯಾಗುತ್ತಿದೆ” ಎಂದು ಬರೆಯುತ್ತಾರೆ. ಇಂತಹ ಸಂದರ್ಭಗಳಲ್ಲಿ, ಆಯಾ ವಿಷಯದ ಶಿಕ್ಷಕರು ‘ಕಪಿಲಾ’ ತಂಡದ ಭಾಗವಾಗಿಲ್ಲದಿದ್ದರೂ ಸಹ, ಮುಂದೆ ಬಂದು ಪ್ರತಿಕ್ರಿಯಿಸುತ್ತಾರೆ.

ನಮ್ಮ ವಿದ್ಯಾರ್ಥಿಗಳು ತಮಗೆ ಬರುವ ಪ್ರತಿಕ್ರಿಯೆಗಳನ್ನು ‘ಕಪಿಲಾ ಬೈದೇವ್’ ಅವರೇ ಬರೆಯುತ್ತಿದ್ದಾರೆ ಎಂದು ನಂಬುತ್ತಾರೆ. ಆದ್ದರಿಂದ, ನಮ್ಮ ಉತ್ತರಗಳನ್ನು ಬರೆಯುವಾಗ ನಾವು ಯಾವಾಗಲೂ ಕಪಿಲಾ ಬೈದೇವ್ ಅವರ ವ್ಯಕ್ತಿತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವ. ತಂಡದ ಎಲ್ಲಾ ಸದಸ್ಯರು ಒಂದೇ ರೀತಿಯ ನಿಲುವನ್ನು ಹೊಂದಿರುವುದನ್ನು ನಾವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಒಬ್ಬರಿಗೊಬ್ಬರು ವಿರುದ್ಧವಾಗಿ ಮಾತನಾಡಲು ಸಾಧ್ಯವಿಲ್ಲ. ಬೇರೆ ಬೇರೆ ಪತ್ರಗಳಲ್ಲಿ ತದ್ವಿರುದ್ಧ ವಿಷಯಗಳನ್ನು ನಾವು ಹೇಳುವಂತಿಲ್ಲ. ಕೈಬರಹದಲ್ಲಿ ಪತ್ರಗಳನ್ನು ಬರೆಯುವ ಆಲೋಚನೆಯನ್ನು ನಾವು ಕೈಬಿಡಲು ಇದೂ ಒಂದು ಕಾರಣ. ವಿದ್ಯಾರ್ಥಿಗಳು ಶಿಕ್ಷಕರ ಕೈಬರಹವನ್ನು ಗುರುತಿಸಿಬಿಡುವ ಸಾಧ್ಯತೆಯಿತ್ತು. ಆದ್ದರಿಂದ, ನಮ್ಮ ಪ್ರತಿಕ್ರಿಯೆಗಳು ಅಂತಿಮಗೊಂಡ ನಂತರ, ನಾವು ಅವುಗಳನ್ನು ವಿಶೇಷವಾದ ‘ಕಪಿಲಾ’ ಮಾದರಿಯಲ್ಲಿ ಮುದ್ರಿಸುತ್ತೇವೆ. ಇದು ಅನಾಮಧೇಯತೆಯನ್ನು ಕಾಪಾಡುವ, ಅಷ್ಟೇ ವೈಯಕ್ತಿಕವಾಗಿ ಭಾಸವಾಗುವ ಒಂದು ಸುಂದರವಾದ ಹಸ್ತಮುದ್ರಿತ ವಿನ್ಯಾಸವಾಗಿದೆ. ಇದು ಹೆಚ್ಚು ಶ್ರಮವನ್ನೂ ಸಹ ಬೇಡುವುದಿಲ್ಲ. ಪತ್ರಗಳನ್ನು ಸ್ವೀಕರಿಸುವ ಅನುಭವವನ್ನು ಇನ್ನಷ್ಟು ಸ್ಮರಣೀಯವಾಗಿಸಲು ನಾವು ಈಗ ಹೊಸ ವಿಧಾನಗಳನ್ನು ಪ್ರಯತ್ನಿಸುತ್ತಿದ್ದೇವೆ.

Kapila Baideu fig 3
ಚಿತ್ರ 3. ಕಪಿಲಾ ಬೈದೇವ್‌ನ ಪ್ರತಿಯೊಂದು ಪ್ರತಿಕ್ರಿಯೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಲಕೋಟೆಯಲ್ಲಿ ಕಳುಹಿಸಲಾಗುತ್ತದೆ. ಇದು `ಅವಳ’ ಉತ್ತರಕ್ಕೆ ವೈಯಕ್ತಿಕ ಸ್ಪರ್ಶವನ್ನು ನೀಡುತ್ತದೆ. ಕೃಪೆ: ದೀಪಕ್ ರಜಪೂತ್. ಪರವಾನಗಿ: CC BY-NC-ND 4.0.

ವಿನ್ಯಾಸದಲ್ಲಿ ಆಸಕ್ತಿಯಿರುವ ನಮ್ಮ ತಂಡದ ಹೊಸ ಸದಸ್ಯರೊಬ್ಬರು ಪ್ರತಿಯೊಂದು ಪತ್ರಕ್ಕೂ ಸಣ್ಣದಾದ, ವೈಯಕ್ತಿಕ ಅಂಶಗಳನ್ನು ಸೇರಿಸಲು ನಮಗೆ ಸಹಾಯ ಮಾಡುತ್ತಿದ್ದಾರೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ತನಗೆ ಇಷ್ಟವಾದ ಕ್ರೀಡಾಪಟುವಿನ ಬಗ್ಗೆ ಬರೆದರೆ, ನಾವು ಆ ಆಸಕ್ತಿಗೆ ಸಂಬಂಧಿಸಿದ ಸಣ್ಣ ಚೀಟಿ ಅಥವಾ ಗುರುತನ್ನು ಪತ್ರದೊಂದಿಗೆ ಸೇರಿಸಬಹುದು. ಈ ಪತ್ರಗಳನ್ನು ತಲುಪಿಸಲು ನಮ್ಮಲ್ಲಿ ಒಬ್ಬ ಅಂಚೆಯಣ್ಣನೂ ಇದ್ದಾರೆ! ಇವರು ಶಾಲೆಯ ನಿರ್ವಹಣೆ ಮತ್ತು ಶಾಲೆಯ ಗೇಟಿನ ಕಾಳಜಿ ತೆಗೆದುಕೊಳ್ಳುವ ನಮ್ಮ ಪ್ರೀತಿಯ ಸಹೋದ್ಯೋಗಿಗಳಲ್ಲೊಬ್ಬರೇ ಆಗಿದ್ದಾರೆ. ಕಪಿಲಾ ಬೈದೇವ್ ಅವರ ಪತ್ರಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು, ಅವರು ತರಗತಿಗೆ ಬಂದು ವಿದ್ಯಾರ್ಥಿಯೊಬ್ಬನ/ಳ ಹೆಸರನ್ನು ಕೂಗಿ, ಚಿಕ್ಕ ಮುಗುಳ್ನಗೆಯೊಂದಿಗೆ ಅವರ ಪತ್ರಗಳನ್ನು ಹಸ್ತಾಂತರಿಸುತ್ತಾರೆ (ಚಿತ್ರ 3 ನೋಡಿ). ಇದು ಈಗ ಒಂದು ಅಮೂಲ್ಯವಾದ ಸಂಪ್ರದಾಯವಾಗಿ ಮಾರ್ಪಟ್ಟಿದೆ.

ಅಂತಿಮ ನುಡಿ

ವಿದ್ಯಾರ್ಥಿಗಳು ಆಲೋಚಿಸುವಂತೆ ಮತ್ತು ಪ್ರಶ್ನೆಗಳನ್ನು ಕೇಳುವಂತೆ ಆಹ್ವಾನಿಸುವ ನಮ್ಮ ಈ ಪ್ರಯತ್ನವು ಹಮ್ಮಿಂಗ್‌ಬರ್ಡ್ ಶಾಲೆಯಲ್ಲಿ ಈಗ ಒಂದು ಪೂರ್ಣ ಪ್ರಮಾಣದ ಉಪಕ್ರಮವಾಗಿ ಬೆಳೆದಿದೆ. ಕಪಿಲಾ ಬೈದೇವ್ ನಮ್ಮ ಶಾಲೆಯಲ್ಲಿ ಈಗ ಮೌನವಾದ, ಆದರೆ ಕುತೂಹಲ, ಸಹಾನುಭೂತಿ ಮತ್ತು ಆಲೋಚನಾ ಶಕ್ತಿಯನ್ನು ಪೋಷಿಸುವ ಒಂದು ಶಕ್ತಿಯುತ ಅಸ್ತಿತ್ವವಾಗಿ ಬೆಳೆದಿದ್ದಾಳೆ.

ಈ ಉಪಕ್ರಮವು ಇಷ್ಟೊಂದು ಯಶಸ್ವಿಯಾಗಲು ಕಾರಣವೇನು? ನನಗೆ ಹೊಳೆಯುವ ಕೆಲವು ಕಾರಣಗಳು ಇಲ್ಲಿವೆ.

  • ಮೊದಲನೆಯದೆಂದರೆ, ಕಪಿಲಾ ಬೈದೇವ್ ಸುತ್ತ ಸೃಷ್ಟಿಯಾಗಿರುವ ನಿಗೂಢತೆ. ವಿದ್ಯಾರ್ಥಿಗಳು ಈ ಪಾತ್ರವನ್ನು ಶಾಲೆಯ ಒಂದು ಶಾಂತ ಮೂಲೆಯಲ್ಲಿರುವ ಪತ್ರದ ಪೆಟ್ಟಿಗೆಯೊಂದಿಗೂ ಮತ್ತು ತಮಗೆ ತಲುಪುವ ಪತ್ರಗಳೊಂದಿಗೂ ಸಮೀಕರಿಸುತ್ತಾರೆ. ಈ ಸರಳವಾದ ವ್ಯವಸ್ಥೆಯು ಮಕ್ಕಳಲ್ಲಿ ಕುತೂಹಲ ಮತ್ತು ಉತ್ಸಾಹವನ್ನು ಹುಟ್ಟುಹಾಕುತ್ತದೆ. ‘ಈ ಪತ್ರಗಳನ್ನು ಬರೆಯುತ್ತಿರುವವರು ಯಾರು?’ ಎಂಬ ಪ್ರಶ್ನೆಯು ವಿದ್ಯಾರ್ಥಿಗಳ ಕುತೂಹಲಭರಿತ ನಿರೀಕ್ಷೆಯನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಿರಿಯ ವಯಸ್ಸಿನ ವಿದ್ಯಾರ್ಥಿಗಳು ಕಪಿಲಾ ಬೈದೇವ್ ಒಬ್ಬ ನಿಜವಾದ ವ್ಯಕ್ತಿಯೆಂದೇ ನಂಬುತ್ತಾರೆ. ಅವರು ಕಳುಹಿಸುವ ಕೆಲವು ಪ್ರಶ್ನೆಗಳಲ್ಲಿ ಇದು ಪ್ರತಿಫಲಿಸುತ್ತದೆ. ಉದಾಹರಣೆಗೆ, ಅವರು ಹೆಚ್ಚಾಗಿ ‘ನೀವು ಎಲ್ಲಿ ವಾಸಿಸುತ್ತೀರಿ?’, ‘ನಿಮ್ಮ ಸ್ನೇಹಿತರು ಯಾರು?’, ‘ನೀವು ನನ್ನ ಸ್ನೇಹಿತರಾಗುತ್ತೀರಾ?’, ‘ನೀವು ನಮ್ಮ ಶಾಲೆಗೆ ಯಾವಾಗ ಬರುತ್ತೀರಿ?’ ಎಂದು ಕೇಳುತ್ತಾರೆ. ಆದರೆ, ಹಿರಿಯ ಅಥವಾ ಹೆಚ್ಚು ತಾರ್ಕಿಕವಾಗಿ ಆಲೋಚಿಸುವ ವಿದ್ಯಾರ್ಥಿಗಳು, ಶಾಲೆಯಲ್ಲೇ ಯಾರೋ ಒಬ್ಬರು ಕಪಿಲಾ ಬೈದೇವ್ ಅವರ ಪರವಾಗಿ ಉತ್ತರಗಳನ್ನು ಬರೆಯುತ್ತಿರಬಹುದು ಎಂದು ಶಂಕಿಸಬಹುದು. ಆದರೆ ಅವರಿಗೂ ಈ ನಿಗೂಢತೆ ಎಂದರೆ ಇಷ್ಟವೇ. ಏಕೆಂದರೆ ವಿಶೇಷವಾಗಿ ಅವರಿಗೆ, ಈ ಉಪಕ್ರಮದ ಹಿಂದೆ ಯಾವ ಶಿಕ್ಷಕರಿದ್ದಾರೆ ಅಥವಾ ಅವರು ಇದನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ನಮ್ಮ ಕಡೆಯಿಂದ ಹೇಳುವುದಾದರೆ, ಈ ಯೋಜನೆಯು ಎಲ್ಲ ಕಡೆಯೂ ಹರಡಿರುವಂತೆ ಇರಲು ಕಪಿಲಾ ಬೈದೇವ್ ಸುತ್ತಲಿರುವ ಈ ನಿಗೂಢತೆಯು ನೆರವಾಗುತ್ತದೆ. ಇದು ಯಾವುದೇ ಒಬ್ಬ ನಿರ್ದಿಷ್ಟ ಶಿಕ್ಷಕರಿಗೆ ಸೀಮಿತವಾಗಿಲ್ಲದ ಕಾರಣ, ಶಾಲೆಯ ಹಲವಾರು ವ್ಯಕ್ತಿಗಳು ಮುಂದೆ ಬಂದು ‘ಕಪಿಲಾ ಬೈದೇವ್’ ಅವರ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗುತ್ತದೆ. ಕೆಲವೊಮ್ಮೆ, ನಾವು ಈ ನಿಗೂಢತೆಯನ್ನು ಸಕ್ರಿಯವಾಗಿ ಕಾಪಾಡುತ್ತೇವೆ. ಉದಾಹರಣೆಗೆ, ಇತ್ತೀಚೆಗೆ ನಾವು ಒಂದು ವಿಷಯವನ್ನು ಗಮನಿಸಿದೆವು; ಅನೇಕ ವಿದ್ಯಾರ್ಥಿಗಳು ತಮ್ಮ ಹೆಸರು ಅಥವಾ ತರಗತಿಯನ್ನು ತಿಳಿಸದೆಯೇ ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದರು. ಈ ವಿವರಗಳಿಲ್ಲದೆ ನಾವು ಅವರಿಗೆ ವೈಯಕ್ತಿಕವಾಗಿ ಪ್ರತಿಕ್ರಿಯೆಗಳನ್ನು ಕಳುಹಿಸುವುದು ಹೇಗೆ ತಾನೇ ಸಾಧ್ಯ?! ನಮ್ಮ ಈ ಸವಾಲನ್ನು ನಾವು ಕಪಿಲಾ ಬೈದೇವ್ ಕಡೆಯಿಂದ ಬರೆದ ಒಂದು ಪತ್ರದ ಮೂಲಕ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡೆವು. ಆ ಪತ್ರವನ್ನು ಶಾಲೆಯ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಓದಲಾಯಿತು. ವಿಶೇಷವೆಂದರೆ, ಅದನ್ನು ಒಬ್ಬ ಶಿಕ್ಷಕರಿಂದ ಓದಿಸದೇ, ವಿದ್ಯಾರ್ಥಿ ಸಂಘದ ಒಬ್ಬ ವಿದ್ಯಾರ್ಥಿ ನಾಯಕನ ಕೈಲಿ ಓದಿಸಲಾಯಿತು. ಹೀಗೆ ಮಾಡಿದ್ದರಿಂದ ನಮ್ಮ ಗುರುತನ್ನು ಬಹಿರಂಗಪಡಿಸದೆಯೇ ವಿದ್ಯಾರ್ಥಿಗಳಿಗೆ ಸಂದೇಶವನ್ನು ಕಳುಹಿಸಲು ನಮಗೆ ಅವಕಾಶ ಆದಂತಾಯಿತು. ಇತರ ಸಂದರ್ಭಗಳಲ್ಲಿ, ಈ ನಿಗೂಢತೆಯ ಭಾವನೆಯು ವಿದ್ಯಾರ್ಥಿಗಳನ್ನು ಅವರ ಕಲ್ಪನಾ ಶಕ್ತಿಯ ಮೂಲಕ ಹೊರಗಿನ ವಿಶಾಲ ಪ್ರಪಂಚದೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, 2024ನೇ ವರ್ಷವು ತೆರೆದುಕೊಳ್ಳುತ್ತಿದ್ದಂತೆ, ಶಾಲೆಯ ವೇಳಾಪಟ್ಟಿಯಲ್ಲಿನ ಬದಲಾವಣೆಗಳು ನಮ್ಮ ಈ ಉಪಕ್ರಮದ ಲಯವನ್ನು ತಪ್ಪಿಸಿದವು. ಸಮಯದ ಅಭಾವದಿಂದ ನಮ್ಮ ತಂಡದ ಹಲವು ಸದಸ್ಯರಿಗೆ ಪ್ರತಿಕ್ರಿಯೆಗಳನ್ನು ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ಸುಮಾರು ಎಂಟು ತಿಂಗಳುಗಳ ಕಾಲ, ಈ ಉಪಕ್ರಮವು ಸುಪ್ತಾವಸ್ಥೆಗೆ ಜಾರಿತ್ತು. ವಿದ್ಯಾರ್ಥಿಗಳಿಂದ ಪ್ರಶ್ನೆಗಳು ಬರುತ್ತಲೇ ಇದ್ದವು, ಆದರೆ ಉತ್ತರಗಳು ಮಾತ್ರ ನಿಂತುಹೋದವು. ಕಪಿಲಾ ಬೈದೇವ್ ಸತ್ತುಹೋಗಿರಬಹುದಾದ ಸಾಧ್ಯತೆಯ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಲು ಪ್ರಾರಂಭಿಸಿದರು. ಈ ವದಂತಿಯು ಶಾಲೆಯಾದ್ಯಂತ ಹರಡತೊಡಗಿತು. ಕೆಲವು ವಿದ್ಯಾರ್ಥಿಗಳಂತೂ “ನಿಮಗೆ ಏನಾಯಿತು?” ಎಂದು ಕೇಳಿ ಅವಳಿಗೆ ಪತ್ರಗಳನ್ನು ಹಾಕಿದರು. ಸುದೈವವಶಾತ್, ಅದೇ ಸಮಯದಲ್ಲಿ ಶಿಕ್ಷಕರ ಪ್ರತಿಕ್ರಿಯೆ ನೀಡುವ ತಂಡಕ್ಕೆ ಹೊಸ ಸದಸ್ಯರೊಬ್ಬರು ಸೇರ್ಪಡೆಗೊಂಡರು. ಈ ವಿರಾಮವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಲು, ಕಪಿಲಾ ಬೈದೇವ್, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಮೇಲೆ ವರದಿ ಮಾಡಲು ಯುರೋಪ್‌ಗೆ ಹೋಗಿದ್ದಳು ಎಂದು ಒಂದು ಕಥೆಯನ್ನು ಸೃಷ್ಟಿಸಿದೆವು. ಈ ಕಾರಣದಿಂದಾಗಿ ಆಕೆ ನಮ್ಮ ವಿದ್ಯಾರ್ಥಿಗಳ ಪತ್ರಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಆಕೆ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದಳು. ಈ ಒಂದು ಸರಳ ಕ್ರಮದಿಂದ ನಾವು ಈ ಉಪಕ್ರಮಕ್ಕೆ ಮರುಜೀವ ನೀಡಲು ಸಹಾಯವಾಯಿತು.
  • ಎರಡನೆಯದೆಂದರೆ, ಈ ಉಪಕ್ರಮವು ಮಕ್ಕಳಿಗೆ ಯಾವುದೇ ಸಂಕೋಚವಿಲ್ಲದೆ ತಮ್ಮ ಕುತೂಹಲವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುತ್ತದೆ. ಮೊದಮೊದಲು, ವಿದ್ಯಾರ್ಥಿಗಳು ‘ಸರಿಯಾದ’ ಕ್ರಮದಲ್ಲಿ ಪತ್ರಗಳನ್ನು ಬರೆಯಬೇಕು ಅಥವಾ ತಮ್ಮ ಪ್ರಶ್ನೆಗಳಿಗಾಗಿ ಒಂದು ನಿರ್ದಿಷ್ಟ ರೀತಿಯ ಕಾಗದವನ್ನೇ ಬಳಸಬೇಕು ಎಂದು ಒತ್ತಾಯಿಸಬಹುದೇ ಎಂಬ ಆಲೋಚನೆ ಮಾಡಿದೆವು. ಆದರೆ, ಸ್ವಲ್ಪ ಆಲೋಚಿಸಿದ ನಂತರ, ನಾವು ಯಾವುದೇ ನಿಯಮಗಳನ್ನು ಹೇರಬಾರದು ಎಂದು ನಿರ್ಧರಿಸಿದೆವು. ವಿದ್ಯಾರ್ಥಿಗಳು ತಮಗೆ ಹೇಗೆ ಬೇಕೋ ಹಾಗೆ ಕಪಿಲಾ ಬೈದೇವ್ ಅವರಿಗೆ ಪತ್ರ ಬರೆಯುತ್ತಾರೆ. ಅವರಿಗೆ ಯಾವಾಗ ಸಮಯ ಸಿಗುತ್ತದೋ ಆಗ ತಮ್ಮ ಪ್ರಶ್ನೆಗಳನ್ನು ಪೆಟ್ಟಿಗೆಗೆ ಹಾಕುತ್ತಾರೆ. ತಮಗೆ ಸಿಕ್ಕ ಯಾವುದೇ ಕಾಗದದ ಮೇಲೆ—ಅದು ದಪ್ಪವಿರಲಿ, ತೆಳ್ಳಗಿರಲಿ ಅಥವಾ ನೋಟ್‌ಬುಕ್‌ನಿಂದ ಹರಿದ ಕಾಗದದ ಸಣ್ಣ ಚೂರುಗಳೇ ಆಗಿರಲಿ—ಅದರಲ್ಲೇ ಪ್ರಶ್ನೆಗಳನ್ನು ಬರೆದು ಕಳುಹಿಸುತ್ತಾರೆ (ಚಿತ್ರ 4 ನೋಡಿ). ಕೆಲವೊಮ್ಮೆ, ಅವರು ಪೆಟ್ಟಿಗೆಯೊಳಗೆ ತಮ್ಮ ಒಂದು ಸಣ್ಣ ಭಾವಚಿತ್ರವನ್ನೂ ಹಾಕುತ್ತಾರೆ. ಬಹುಶಃ, ಕಪಿಲಾ ಈ ಫೋಟೋಗಳನ್ನು ನೋಡಬಹುದು ಎಂದು ಅವರು ನಂಬಲು ಬಯಸುತ್ತಾರೇನೋ.
ಚಿತ್ರ 4. ಕಪಿಲಾ ಬೈದೇವ್‌ಗೆ ಒಂದು ವಿದ್ಯಾರ್ಥಿ ಬರೆದ ಪತ್ರದ ಉದಾಹರಣೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಯಾವುದೇ ಕಾಗದದ ಮೇಲೆ ಅಥವಾ ಯಾವುದೇ ರೂಪದಲ್ಲಿ ಪ್ರಶ್ನೆಗಳನ್ನು ಕಳುಹಿಸುತ್ತಾರೆ. ವಿದ್ಯಾರ್ಥಿಯ ಗೌಪ್ಯತೆಗಾಗಿ ಅವರ ಹೆಸರನ್ನು ಈ ಚಿತ್ರದಿಂದ ಅಳಿಸಿಹಾಕಲಾಗಿದೆ. ಕೃಪೆ: ದೀಪಕ್ ರಜಪೂತ್. ಪರವಾನಗಿ: CC BY-NC-ND 4.0.
  • ಮೂರನೆಯದು, ಕಪಿಲಾ ಬೈದೇವ್ ಕಡೆಯಿಂದ ಪತ್ರಗಳನ್ನು ಸ್ವೀಕರಿಸಿದಾಗ ವಿದ್ಯಾರ್ಥಿಗಳಿಗೆ ಎಂಥ ಭಾವನೆ ಉಂಟಾಗುತ್ತದೆ ಎಂಬುದು. ಪ್ರತಿಯೊಂದು ಪತ್ರವನ್ನು ವಿದ್ಯಾರ್ಥಿಗಳ ತರಗತಿಯಲ್ಲೇ ಅವರಿಗೆ ಖುದ್ದಾಗಿ ಹಸ್ತಾಂತರಿಸಲಾಗುತ್ತದೆ. ವಿದ್ಯಾರ್ಥಿಯು ಪತ್ರವನ್ನು ತೆರೆದಾಗ, ಅವರಿಗೆ ಒಂದು ಆತ್ಮೀಯ ಮತ್ತು ಮೃದುವಾದ ಧ್ವನಿ ಕೇಳಿಸಿದಂತಾಗುತ್ತದೆ. ಪತ್ರದ ವಿಷಯವು ಅದನ್ನು ಸ್ವೀಕರಿಸುವ ವಿದ್ಯಾರ್ಥಿಯ ತಿಳುವಳಿಕೆಯ ಮಟ್ಟಕ್ಕೆ ಅನುಗುಣವಾಗಿರುತ್ತದೆ. ಈ ಪತ್ರಗಳು ವೈಯಕ್ತಿಕವಾಗಿದ್ದರೂ ಸಹ, ವಿದ್ಯಾರ್ಥಿಗಳಿಗೆ ಉಪದೇಶ ನೀಡುವುದಿಲ್ಲ ಅಥವಾ ಅವರು ಮುಜುಗರಕ್ಕೊಳಗಾಗುವಂತೆ ಮಾಡುವುದಿಲ್ಲ. ವಿದ್ಯಾರ್ಥಿಗಳು ಕಪಿಲಾ ಅವರೊಂದಿಗೆ ಸಂವಹನ ನಡೆಸುವುದು ಸುರಕ್ಷಿತವೆಂದು ಭಾವಿಸುತ್ತಾರೆ.

ಶಿಕ್ಷಕರು ಈ ಉಪಕ್ರಮವನ್ನು ತಮ್ಮ ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲು ಹಲವು ಮಾರ್ಗಗಳಿರಬಹುದು. ನಮಗೆ ಇದು ಕೇವಲ ಆರಂಭವಷ್ಟೇ. ನಾವು ಇನ್ನೂ ಕಲಿಯುತ್ತಿದ್ದೇವೆ ಮತ್ತು ಇಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ನಮ್ಮ ವಿದ್ಯಾರ್ಥಿಗಳ ಪ್ರಶ್ನೆಗಳು ಬಹಳ ಮುಖ್ಯ ಎಂಬುದು ಅವರಿಗೆ ತಿಳಿಯುವಂತೆ ಮಾಡಲು ಮತ್ತು ಅವರ ಧ್ವನಿಗೆ ಮನ್ನಣೆ ಸಿಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಲು ನಾವು ಇನ್ನೂ ಅನೇಕ ಹೊಸ ವಿಧಾನಗಳನ್ನು ಪ್ರಯತ್ನಿಸುವ ಭರವಸೆ ಹೊಂದಿದ್ದೇವೆ

ಟಿಪ್ಪಣಿಗಳು

  • ಲೇಖನದ ಶೀರ್ಷಿಕೆಯ ಹಿನ್ನೆಲೆಯಲ್ಲಿ ಬಳಸಿರುವ ಚಿತ್ರದ (ಶಾಲೆಯಲ್ಲಿ ಕಪಿಲಾ ಬೈದೇವ್‌ ಮೂಲೆ) ಮೂಲ: ದೀಪಕ್‌ ರಾಜ್‌ಪೂತ್‌. ಪರವಾನಗಿ: CC BY-NC-ND 4.0.

ಪರಾಮರ್ಶನ

  1. Azim Premji University (2022). ‘i wonder… Webinar : Asking Questions in Science’. URL: https://www.youtube.com/watch?v=eQdloz9PgRU.
  2. Eklavya. ‘Sawaliram’. Tata Institute of Fundamental Research (TIFR Centre for Interdisciplinary Sciences), Hyderabad, and Eklavya, Bhopal. URL: https://sawaliram.org/. Accessed on Aug 6, 2025.