ಲೇಖಕರಿಗೆ ಕೆಲವು ಸೂಚನೆಗಳು

ಐ ವಂಡರ್… ಪತ್ರಿಕೆಗೆ ಲೇಖನಗಳನ್ನು ಸಲ್ಲಿಸಲು ಆಸಕ್ತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಯಾವ ರೀತಿಯ ಲೇಖನಗಳನ್ನು ಸಲ್ಲಿಸಬೇಕು ಎಂದು ನಿರ್ಧರಿಸಲು ಈ ಪುಟದಲ್ಲಿರುವ ವಿವರಗಳು ನಿಮಗೆ ಸಹಕಾರಿಯಾಗಲಿವೆ.

ಗುರಿ ಮತ್ತು ಓದುಗರು:

ಐ ವಂಡರ್… ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಒಂದು ಪ್ರಕಟಣೆ. ಈ ಕೆಳಗಿನ ಅಂಶಗಳಿಗೆ ಪೂರಕವಾಗುವಂತಹ ಲೇಖನಗಳು ಮತ್ತು ಸಂಪನ್ಮೂಲಗಳನ್ನು ಪ್ರಕಟಿಸುವುದು ನಮ್ಮ ಉದ್ದೇಶ:

  • ಪೂರ್ವಸಿದ್ಧತಾ ಹಂತದ (3–5ನೇ ತರಗತಿ) ಪರಿಸರ ಅಧ್ಯಯನ ಮತ್ತು ಮಾಧ್ಯಮಿಕ ಹಂತದ (6–8ನೇ ತರಗತಿ) ವಿಜ್ಞಾನದ ಕಲಿಕೆ ಮತ್ತು ಬೋಧನೆ.
  • ಸರ್ಕಾರಿ ಶಾಲೆಗಳ ಶಿಕ್ಷಕರ ತರಗತಿ ಬೋಧನೆ ಮತ್ತು ಅವರೊಂದಿಗೆ ಕೆಲಸ ಮಾಡುವ ಶಿಕ್ಷಕ ತರಬೇತುದಾರರ ಕಾರ್ಯಾಗಾರಗಳಲ್ಲಿ ಬಳಸಬಹುದಾದ ಸಂಪನ್ಮೂಲಗಳು.

ನಾವು ಈ ಕೆಳಕಂಡ ರೀತಿಯ ಲೇಖನಗಳನ್ನು ಪ್ರಕಟಿಸುತ್ತೇವೆ:

  • ಗಮನವಿಟ್ಟು ವೀಕ್ಷಿಸುವ, ಪುರಾವೆಗಳೊಂದಿಗೆ ತರ್ಕಿಸುವ, ಪಠ್ಯಪುಸ್ತಕದಲ್ಲಿರುವ ಪ್ರತಿಪಾದನೆಗಳನ್ನು ಪರೀಕ್ಷಿಸುವ ಮತ್ತು ವಿಜ್ಞಾನದ ಪರಿಕಲ್ಪನೆಗಳನ್ನು ತಮ್ಮ ದೈನಂದಿನ ಜಗತ್ತಿಗೆ ಅನ್ವಯಿಸುವ ನೇರ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಲೇಖನಗಳು.
  • ತರಗತಿಯಲ್ಲಿ ಪ್ರಯತ್ನಿಸಿರುವ, ಆಳವಾದ ಆಲೋಚನೆಯಿಂದ ಹೊರಹೊಮ್ಮಿದ, ಅಥವಾ ತರಗತಿ ಬೋಧನೆಯ ಮೂಲಕ ಪಳಗಿರುವ ಲೇಖನಗಳು.
  • ಪರಿಸರ ಅಧ್ಯಯನ ಮತ್ತು ವಿಜ್ಞಾನ ಶಿಕ್ಷಕರು ತಮ್ಮದೇ ಆದ ಸಂದರ್ಭಗಳಲ್ಲಿ ತರಗತಿಯ ಬೋಧನೆಯನ್ನು ಯೋಜಿಸಲು ಮತ್ತು ರೂಪಿಸಲು ಬಳಸಬಹುದಾದ ಸಂಪನ್ಮೂಲಗಳು.
  • ಪರಿಸರ ಅಧ್ಯಯನ ಅಥವಾ ವಿಜ್ಞಾನ ಪಠ್ಯಪುಸ್ತಕಗಳ ವಿಚಾರಗಳು, ವಿಷಯಗಳು ಅಥವಾ ಪ್ರಶ್ನೆಗಳೊಂದಿಗೆ ನೇರ ಸಂಬಂಧವನ್ನು ಎತ್ತಿ ತೋರಿಸುವ ಲೇಖನಗಳು.
  • ಆಯಾ ತರಗತಿಯ ಕಲಿಕಾ ಫಲಿತಗಳಿಗೆ ಅನುಗುಣವಾದ ವಿಷಯದ ವ್ಯಾಪ್ತಿ, ಆಳ ಮತ್ತು ಸಾರಾಂಶವನ್ನು ಹೊಂದಿರುವ ಲೇಖನಗಳು.
  • ಲೇಖನದ ಪ್ರಮುಖ ಆಲೋಚನೆಗಳು ಅಥವಾ ಚಟುವಟಿಕೆಗಳನ್ನು ವಿವಿಧ ತರಗತಿಯ ಸಂದರ್ಭಗಳು, ಸಮಯದ ಮಿತಿಗಳು ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸುವ ಬರಹಗಳು.
  • ಕಡಿಮೆ ವೆಚ್ಚದ ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಮಾಡಬಹುದಾದ ಮತ್ತು ಮುಖ್ಯವಾಗಿ, ಸರ್ಕಾರಿ ಶಾಲೆಗಳ ಸಂದರ್ಭಕ್ಕೆ ಹೊಂದುವಂತಹ ಚಟುವಟಿಕೆಗಳನ್ನು ವಿವರಿಸುವ ಲೇಖನಗಳು.
  • ಶಿಕ್ಷಕರು ಯಾಂತ್ರಿಕವಾಗಿ ನಿಗದಿತ ಹಂತಗಳನ್ನು ಅನುಸರಿಸುವ ಬದಲು, ತಾವೇ ಸ್ವತಃ ಯೋಚಿಸಿ, ನಿರ್ಧರಿಸಿ, ವಿದ್ಯಾರ್ಥಿಗಳ ಪ್ರತಿಕ್ರಿಯೆಗಳಿಗೆ ಸ್ಪಂದಿಸುವಂತೆ ಪ್ರೇರೇಪಿಸುವ ಬರಹಗಳು.

ಐ ವಂಡರ್… ಪತ್ರಿಕೆಗೆ ಸೂಕ್ತವಲ್ಲದ ಬರಹಗಳು:

  • ತರಗತಿ ಅನುಭವಗಳ ಹಿನ್ನೆಲೆ ಇಲ್ಲದ ಕೇವಲ ಸೈದ್ಧಾಂತಿಕ ಚರ್ಚೆಗಳು, ಸಾಮಾನ್ಯ ಅಭಿಪ್ರಾಯಗಳು ಅಥವಾ ಶಿಕ್ಷಣ ನೀತಿಗಳ ವಿಶ್ಲೇಷಣೆಗಳು.
  • ವಿದ್ಯಾರ್ಥಿಗಳ ಪರಿಕಲ್ಪನಾ ತಿಳಿವಳಿಕೆ ಮತ್ತು ವಿಜ್ಞಾನ ಕೌಶಲಗಳನ್ನು ಬೆಳೆಸುವ ಬದಲು, ಪಠ್ಯಪುಸ್ತಕದ ಅಂಶಗಳನ್ನು ಮತ್ತು ವ್ಯಾಖ್ಯಾನಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಮಾತ್ರ ಒತ್ತು ನೀಡುವ ಬರಹಗಳು.
  • ಆಲೋಚನೆ ಮತ್ತು ಪರಿಕಲ್ಪನೆಗಳನ್ನು ವಿವರಿಸದೆ ಅಥವಾ ಅವು ವಿದ್ಯಾರ್ಥಿಗಳ ದೈನಂದಿನ ಜಗತ್ತಿಗೆ ಹೇಗೆ ಸಂಬಂಧಿಸಿವೆ ಎಂದು ತಿಳಿಸದೆ ಕೇವಲ ಮಾಹಿತಿಯನ್ನು ನೀಡುವ ಲೇಖನಗಳು.
  • ಪ್ರಸಕ್ತ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಸೂಚಿಸಿರುವ ಆಯಾ ಹಂತದ ಗುರಿಗಳಿಗೆ ಅಥವಾ ತರಗತಿಗೆ ಸಂಬಂಧಿಸಿದ ಪಠ್ಯಪುಸ್ತಕದ ವಿಷಯಗಳಿಗೆ ಸಂಬಂಧವಿಲ್ಲದ ಪರಿಕಲ್ಪನೆಗಳನ್ನು ಕುರಿತಾದ ಬರಹಗಳು.
  • ಶಿಕ್ಷಕರು ತಮ್ಮ ತರಗತಿಗಳಲ್ಲಿ ಅನ್ವೇಷಿಸಬಹುದಾದ ಪ್ರಶ್ನೆಗಳು, ತೆಗೆದುಕೊಳ್ಳಬಹುದಾದ ನಿರ್ಧಾರಗಳು ಮತ್ತು ವಿಷಯಗಳ ನಡುವಿನ ಸಂಬಂಧಗಳನ್ನು ಹಂಚಿಕೊಳ್ಳುವ ಬದಲು, ಕೇವಲ ಯಾಂತ್ರಿಕವಾಗಿ ಅನುಸರಿಸಬೇಕಾದ ಹಂತ-ಹಂತದ ಸೂಚನೆಗಳನ್ನು ನೀಡುವ ಬರಹಗಳು.
  • ಸುಸಜ್ಜಿತ ಪ್ರಯೋಗಾಲಯಗಳು, ದುಬಾರಿ ಉಪಕರಣಗಳು ಮತ್ತು ಸಾಮಗ್ರಿಗಳನ್ನು ಬೇಡುವ ಚಟುವಟಿಕೆಗಳು ಅಥವಾ ಪ್ರಯೋಗಗಳು.

ಪ್ರಕಟಣೆಯ ನಿಬಂಧನೆಗಳು:

  • ಐ ವಂಡರ್… ಯಾವುದೇ ರೀತಿಯ ಕೃತಿಚೌರ್ಯವನ್ನು ಸಹಿಸುವುದಿಲ್ಲ. ಲೇಖನವನ್ನು ಪ್ರಕಟಣೆಗೆ ಸಲ್ಲಿಸುವ ಮೂಲಕ, ನೀವು ಅದು ನಿಮ್ಮದೇ ಲೇಖನವೆಂದೂ ಮತ್ತು ಪ್ರಕಟಣೆಗೆ ಯಾವುದೇ ಕಾನೂನುಬದ್ಧ ನಿರ್ಬಂಧಗಳು ಇಲ್ಲವೆಂದು (ಹಿಂದಿನ ಕೃತಿಸ್ವಾಮ್ಯವೂ ಸೇರಿದಂತೆ) ಖಾತ್ರಿಪಡಿಸುತ್ತೀರಿ.
  • ನೀವು ಸಲ್ಲಿಸಿರುವ ಲೇಖನವು ಈಗಾಗಲೇ ಬೇರೆಡೆ ಪ್ರಕಟವಾಗಿದ್ದರೆ, ಲೇಖಕರು ಹಿಂದಿನ ಪ್ರಕಾಶಕರಿಂದ ಅದನ್ನು ಪುನಃ ಪ್ರಕಟಿಸಲು ಅನುಮತಿ ಪಡೆದು, ಅದರ ವಿವರವನ್ನು ಲೇಖನದ ಕೊನೆಯಲ್ಲಿ ‘ಲೇಖಕರ ಟಿಪ್ಪಣಿ’ ರೂಪದಲ್ಲಿ ಉಲ್ಲೇಖಿಸಬೇಕು.
  • ನೀವು ಸಲ್ಲಿಸಿದ ಲೇಖನವು ಐ ವಂಡರ್‌…ನಲ್ಲಿ ಪ್ರಕಟಗೊಂಡರೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ನಿಮ್ಮ ಲೇಖನವನ್ನು ಅನುವಾದಿಸುವ ಹಾಗೂ ಪ್ರಸಾರ ಮಾಡುವ ಹಕ್ಕನ್ನು ಹೊಂದಿದೆ. ಲೇಖನಗಳನ್ನು ಪ್ರಸ್ತುತ ಕನ್ನಡ ಮತ್ತು ಹಿಂದಿ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ.
  • ಐ ವಂಡರ್‌…ನಲ್ಲಿ ಪ್ರಕಟವಾಗಿದ್ದ ನಿಮ್ಮ ಲೇಖನವನ್ನು ಬೇರೆ ಎಲ್ಲಾದರೂ ಮತ್ತೆ ಪ್ರಕಟಿಸುವ ಸಂದರ್ಭದಲ್ಲಿ, ಲೇಖನವು ಮೊದಲು ಐ ವಂಡರ್‌…ನಲ್ಲಿ ಪ್ರಕಟವಾಗಿತ್ತು ಎಂಬುದನ್ನು ಸ್ಪಷ್ಟವಾಗಿ ಸೂಚಿಸಬೇಕು.
  • ಎಲ್ಲ ಲೇಖನಗಳನ್ನೂ Creative Commons Attribution–NonCommercial (CC BY-NC) 4.0 International ಪರವಾನಗಿಯಡಿಯಲ್ಲಿ ಪ್ರಕಟಿಸಲಾಗುವುದು. ಬೇರೆ ಪರವಾನಗಿಯಡಿಯಲ್ಲಿ ಲೇಖನವನ್ನು ಪ್ರಕಟಿಸಲು ನಮ್ಮನ್ನು ಸಂಪರ್ಕಿಸಿ.

ಏನನ್ನು ಸಲ್ಲಿಸಬೇಕು:

  • ಇಂಗ್ಲಿಷ್, ಹಿಂದಿ ಅಥವಾ ಕನ್ನಡ ಭಾಷೆಯಲ್ಲಿರುವ ಸಂಕ್ಷಿಪ್ತ ರೂಪರೇಖೆ (ಸುಮಾರು 200 ಪದಗಳು) ಅಥವಾ ಪೂರ್ಣ ಪ್ರತಿ (ಸುಮಾರು 800–1500 ಪದಗಳು). ಲೇಖನಗಳು ಸರಳವಾಗಿದ್ದು, ಶೈಕ್ಷಣಿಕ ಪಾರಿಭಾಷಿಕ ಪದಗಳಿಂದ ಮುಕ್ತವಾಗಿರಲಿ. ನೀವು ಏನನ್ನು ಹಂಚಿಕೊಳ್ಳುತ್ತಿದ್ದೀರಿ ಎಂಬುದು ಮಾತ್ರವಲ್ಲದೆ, ಒಬ್ಬ ಶಿಕ್ಷಕರಾಗಿ, ಶಿಕ್ಷಣ ತಜ್ಞರಾಗಿ ಅಥವಾ ಸಂಶೋಧಕರಾಗಿ ಆ ಆಲೋಚನೆಗಳು ನಿಮಗೆ ಏಕೆ ಮುಖ್ಯವೆನಿಸುತ್ತವೆ ಎಂದು ತಿಳಿಯಲೂ ನಾವು ಆಸಕ್ತರಾಗಿದ್ದೇವೆ.
  • ಚಿತ್ರಗಳು ಅಥವಾ ಭಾವಚಿತ್ರಗಳು ಮುದ್ರಣಕ್ಕೆ ಯೋಗ್ಯವಾಗಿರಬೇಕು (ಕನಿಷ್ಠ 300 dpi). ಅವುಗಳಿಗೆ ಸೂಕ್ತ ಶೀರ್ಷಿಕೆ, ಚಿತ್ರ ಕೃಪೆ ಮತ್ತು ಪರವಾನಗಿಯ ವಿವರಗಳನ್ನು ನೀಡಿ. ವಿದ್ಯಾರ್ಥಿಗಳಿರುವ ಫೋಟೋಗಳನ್ನು ಬಳಸುವಾಗ ಅವರ ತಂದೆ ತಾಯಿ ಅಥವಾ ಪೋಷಕರಿಂದ (guardian) ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯ. ಸಾಧ್ಯವಾದಷ್ಟು ಮಟ್ಟಿಗೆ, ವಿದ್ಯಾರ್ಥಿಗಳ ಮುಖ ನೇರವಾಗಿ ಕಾಣುವ ಫೋಟೋಗಳನ್ನು ಬಳಸಬೇಡಿ (ಬದಿ ಅಥವಾ ಹಿಂಭಾಗದಿಂದ ತೆಗೆದ ಚಿತ್ರಗಳಿಗೆ ಆದ್ಯತೆ ನೀಡಿ).
  • ವಿಜ್ಞಾನ ಮತ್ತು/ಅಥವಾ ವಿಜ್ಞಾನ ಶಿಕ್ಷಣದಲ್ಲಿ ನಿಮ್ಮ ಹಿನ್ನೆಲೆ, ಮತ್ತು ನಿಮ್ಮ ಆಸಕ್ತಿಯ ಕ್ಷೇತ್ರಗಳ ಕುರಿತು ತಿಳಿಸುವ ಸಂಕ್ಷಿಪ್ತ ಪರಿಚಯವನ್ನು (ಗರಿಷ್ಠ 50 ಪದಗಳು) ಲೇಖನದ ಜೊತೆಗೆ ಸೇರಿಸಿ.

ಸಲ್ಲಿಸುವುದು ಹೇಗೆ:

ನಿಮ್ಮ ಬರಹಗಳನ್ನು ಲೇಖನ ಲೇಖನವನ್ನು ಸಲ್ಲಿಸಿ ಪುಟದಲ್ಲಿ ಅಪ್‌ಲೋಡ್ ಮಾಡಬಹುದು ಅಥವಾ iwonder@apu.edu.in ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.